ಪ್ರವಾಹ ಪರಿಣಾಮ: ಕೆಸರು ಹೊರ ಹಾಕಲು ಜನರ ಪರದಾಟ

Update: 2019-08-18 17:50 GMT

ಗದಗ, ಆ.18: ಪ್ರವಾಹದಿಂದಾಗಿ ಅಡುಗೆಕೋಣೆ, ಊಟದ ಕೋಣೆ, ಮಲಗುವ ಕೋಣೆ ಸೇರಿದಂತೆ ಹೆಜ್ಜೆಯೂರಲೂ ಜಾಗವಿಲ್ಲದಂತೆ ಇಡೀ ಮನೆ ತುಂಬಾ ಕೆಸರು ತುಂಬಿಕೊಂಡಿದೆ. ಪುರುಷರು ಬಕೆಟ್‌ಗಳಲ್ಲಿ ಮನೆಯ ಒಳಗಿನ ಕೆಸರನ್ನು ತುಂಬಿಕೊಂಡು ಬಂದು ಹೊರಚೆಲ್ಲುತ್ತಿದ್ದಾರೆ. ಮಹಿಳೆಯರು ಪಾತ್ರೆಗಳನ್ನು, ಬಟ್ಟೆಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಲು ಹಾಕುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ.

ಪ್ರವಾಹದಲ್ಲಿ ಜಿಲ್ಲೆಯ ಹಲವು ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದವು. ನೆರೆ ಇಳಿದ ನಂತರ ಈ ಎಲ್ಲ ಗ್ರಾಮಗಳಲ್ಲಿ ಕೆಸರು ತುಂಬಿಕೊಂಡು ನಿಂತಿದೆ. ಪ್ರತಿಯೊಂದು ಮನೆಯಲ್ಲೂ ಮೊಣಕಾಲು ವರೆಗೆ ಕೆಸರು ನಿಂತಿದೆ. ಮನೆಯೊಳಗೆ ಸೇರಿದ ಕೊಳಚೆ ರಾಡಿಯನ್ನು ಹೊರ ಹಾಕಲು ಜನರು ಪರದಾಡುತ್ತಿದ್ದಾರೆ.

ಪ್ರವಾಹದ ಸಂದರ್ಭದಲ್ಲಿ ಗ್ರಾಮಗಳನ್ನು ಹೊಳೆಆಲೂರು-ರೋಣ ರಸ್ತೆಯ ನಡುವೆ ನಿರ್ಮಿಸಲಾಗಿದ್ದ ಆಸರೆ ಮನೆಗಳಿಗೆ ಸ್ಥಳಾಂತರಿಸಲಾಗಿತ್ತು. ಈಗ ನೆರೆ ಇಳಿದ ನಂತರ ಒಬ್ಬೊಬ್ಬರಾಗಿ ಸ್ವ ಗ್ರಾಮಗಳಿಗೆ ಮರಳುತ್ತಿದ್ದಾರೆ. ಪುರುಷರು ಮೊದಲು ಹೋಗಿ ಮನೆ ವಾಸಯೋಗ್ಯವೇ ಎನ್ನುವುದನ್ನು ಪರಿಶೀಲಿಸಿಕೊಂಡು ಬರುತ್ತಿದ್ದಾರೆ.

ಕೆಲವೆಡೆ ಮನೆಗಳು ಮುಟ್ಟಿದರೆ ಬೀಳುವ ಸ್ಥಿತಿಯಲ್ಲಿವೆ. ಅಂತವರು ಆಸರೆ ಮನೆಗಳಲ್ಲೇ ಉಳಿದುಕೊಂಡಿದ್ದಾರೆ. ಹೊಸದಾಗಿ ಮನೆ ಕಟ್ಟಿಸಿದವರು, ಕಾಂಕ್ರೀಟ್ ಮನೆಗಳನ್ನು ಹೊಂದಿವರು, ತಮ್ಮ ಕುಟುಂಬದ ಸದಸ್ಯರ ಜತೆಗೆ ಊರಿಗೆ ಮರಳಿ, ಮನೆ ಸ್ಚಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಇಲ್ಲಿಯೇ ಮಲಪ್ರಭಾ ನದಿ ಹರಿಯುತ್ತಿದ್ದರೂ ಕುಡಿಯಲು ಹನಿ ನೀರಿಲ್ಲ. ಮನೆ ಸ್ವಚ್ಛಗೊಳಿಸಬೇಕಾದರೂ ನೆರೆಯ ನೀರೇ ಆಶ್ರಯವಾಗಿದೆ.

ಎಲ್ಲರ ಮನೆಗಳಲ್ಲಿ ಸಂಗ್ರಹಿಸಿಟ್ಟದ ದವಸ ಧಾನ್ಯಗಳು ನೀರಿನಲ್ಲಿ ಮುಳುಗಿದೆ. ದಾನಿಗಳು ನೀಡಿದ ಆಹಾರದಲ್ಲೇ ದಿನ ಕಳೆಯುತ್ತಿದ್ದೇವೆ. ಅವರಿಂದಲೇ ನಾವು ಬದುಕಿದ್ದೇವೆ ಎಂದು ಸ್ಥಳೀಯ ಗ್ರಾಮದ ನಿಂಗಪ್ಪ ಅಳಲು ತೋಡಿಕೊಂಡರು.

10 ಎಕರೆ ಪ್ರದೇಶದ ಗೋವಿನಜೋಳ, ಸೂರ್ಯಕಾಂತಿ ಬೆಳೆ ಸಂಪೂರ್ಣ ನಾಶವಾಗಿದೆ. ಜನರಿಗೆ ತಿನ್ನಲು ಅನ್ನವಿಲ್ಲ, ಜಾನುವಾರುಗಳಿಗೆ ಮೇವಿಲ್ಲದಂತಹ ಪರಿಸ್ಥಿತಿ ಎದುರಾಗಿದೆ ಎಂದು ಪ್ರವಾಹದಿಂದ ನಾಶವಾಗಿರುವ ತಮ್ಮ ಜಮೀನನನ್ನು ತೋರಿಸುತ್ತಾ ರೈತರು ನೋವು ವ್ಯಕ್ತಪಡಿಸಿದರು.

ಶಾಲೆ ಆರಂಭಗೊಂಡಿಲ್ಲ: ಪ್ರವಾಹ ಪೀಡಿತ ಗ್ರಾಮಗಳಲ್ಲಿ ಶಾಲೆಗಳು ಇನ್ನೂ ಪ್ರಾರಂಭವಾಗಿಲ್ಲ. ಸರಕಾರಿ ಶಾಲೆಗಳ ಆವರಣದಲ್ಲಿ ಸಂಪೂರ್ಣ ಕೆಸರು ನೀರು ನಿಂತಿದೆ. ಮನೆಗಳನ್ನು ಜನರು ಬೇಗ ಸ್ಚಚ್ಛಗೊಳಿಸುತ್ತಾರೆ. ಆದರೆ, ಶಾಲೆಯನ್ನು ಸ್ವಚ್ಛಗೊಳಿಸಿ, ತರಗತಿ ಪ್ರಾರಂಭಿಸಲು ವಾರಗಳೇ ಬೇಕಾಗಬಹುದು ಎನ್ನುತ್ತಿದ್ದಾರೆ ಸಾರ್ವಜನಿಕರು. ಹಾನಿಯಾಗಿರುವ ಶಾಲೆಗಳನ್ನು ಗುರುತಿಸಿ, ಅಲ್ಲಿ ಪ್ರಾಥಮಿಕ ದುರಸ್ತಿ ಕಾರ್ಯ ಕೈಗೊಂಡು, ಮೇಲ್ಛಾವಣಿ ಹೋಗಿರುವ ಶಾಲೆಗಳಿಗೆ ತಾತ್ಕಾಲಿಕವಾಗಿ ತಗಡಿನ ಶೀಟ್‌ಗಳನ್ನು ಹಾಕಿ ಶಾಲೆ ಪುನರಾರಂಭಿಸಲು ಜಿಲ್ಲಾಡಳಿತವು ಕ್ರಮ ಕೈಗೊಳ್ಳಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News