ಗಾಂಧಿ ಗ್ರಾಮ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Update: 2019-08-18 17:53 GMT

ಬೆಂಗಳೂರು, ಆ.18: ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ವತಿಯಿಂದ 2018-19 ನೆ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿರುವ ಗ್ರಾಮ ಪಂಚಾಯತ್‌ಗಳಿಂದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿ ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿ ಸರಕಾರದ ವಿವಿಧ ಯೋಜನೆಗಳ ಅನುಷ್ಠಾನ, ಕುಡಿಯುವ ನೀರು, ಆರೋಗ್ಯ, ಸ್ವಚ್ಛತೆ, ಶಿಕ್ಷಣ, ತೆರಿಗೆ ಸಂಗ್ರಹ ಸೇರಿದಂತೆ ಮೂಲಭೂತ ಸೌಲಭ್ಯಗಳು ಕಲ್ಪಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬ ಬಗ್ಗೆ ‘ಪಂಚತಂತ್ರ’ ತಂತ್ರಾಂಶದಲ್ಲಿ 150 ಪ್ರಶ್ನೆಗಳನ್ನು ನಿಗದಿ ಮಾಡಿದ್ದು, ಅದಕ್ಕೆ ಗ್ರಾಮ ಪಂಚಾಯತ್‌ಗಳು ಉತ್ತರಿಸಬೇಕಿದೆ.

ಅತಿ ಹೆಚ್ಚು ಅಂಕಗಳಿಸಿದ ಪ್ರತಿ ತಾಲೂಕಿನ ಮೂರು ಪಂಚಾಯತ್‌ಗಳನ್ನು ಜಿಲ್ಲಾ ಪಂಚಾಯತಿಗೆ ಕಳುಹಿಸಲಾಗುತ್ತದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪುರಸ್ಕಾರಕ್ಕೆ ಅರ್ಹತೆ ಪಡೆದಿರುವ ಗ್ರಾಮ ಪಂಚಾಯತ್‌ಗಳು ಉತ್ತರಿಸಿರುವ ಅಂಶಗಳನ್ನು ಆಧರಿಸಿ ದಾಖಲೆ ಪರಿಶೀಲನೆ ಮಾಡಲಿದ್ದಾರೆ.

ಪರಿಶೀಲನೆ ಬಳಿಕ ಜಿಲ್ಲಾ ಪರಿಶೀಲನಾ ಅಥವಾ ಆಯ್ಕೆ ಸಮಿತಿ ಪುರಸ್ಕಾರಕ್ಕೆ ಅರ್ಹತೆ ಪಡೆದಿರುವ ಗ್ರಾಮ ಪಂಚಾಯತ್‌ಗಳ ಪೈಕಿ ಪ್ರತಿ ತಾಲೂಕಿಗೆ ಒಂದರಂತೆ ಅಂತಿಮ ಮಾಡಿ ಸಲ್ಲಿಸಲಾಗುತ್ತದೆ. ಆ ಬಳಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದ ರಾಜ್ಯಮಟ್ಟದ ಪರಾಮರ್ಶೆ ಸಮಿತಿ ಅಂತಿಮ ಪಟ್ಟಿಯನ್ನು ಆಯ್ಕೆ ಮಾಡಲಿದೆ. ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು ಆ.31 ರಂದು ಕೊನೆಯ ದಿನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News