ಪ್ರಧಾನಿ ಮೋದಿಗೆ ಕಣ್ಣು-ಕಿವಿ ಎರಡೂ ಇಲ್ಲ: ಸಿದ್ದರಾಮಯ್ಯ

Update: 2019-08-19 12:55 GMT

ಬಾದಾಮಿ, ಆ. 19: ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಸ್ವರೂಪದ ಪ್ರವಾಹ ಬಂದು ಹದಿನೈದು ದಿನಗಳು ಕಳೆದರೂ, ಕೇಂದ್ರದಿಂದ ಈವರೆಗೂ ಒಂದೇ ಒಂದು ನಯಾಪೈಸೆ ಹಣ ಬಂದಿಲ್ಲ. ಪ್ರಧಾನಿ ಮೋದಿಯವರಿಗೆ ಕಣ್ಣು-ಕಿವಿ ಎರಡೂ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಬಾದಾಮಿ ಕ್ಷೇತ್ರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರಿಗೆ ಪ್ರಧಾನಿ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಂಡರೆ ಭಯ ಎಂದು ಟೀಕಿಸಿದರು.

ಈ ಹಿಂದೆ ಸಾಲಮನ್ನಾ ವಿಚಾರವಾಗಿ ದಿಲ್ಲಿಗೆ ತೆರಳಿದ್ದ ವೇಳೆ ಬಿಎಸ್‌ವೈ ಏನೂ ಮಾತನಾಡಲಿಲ್ಲ. ನನ್ನ ಪ್ರಕಾರ 1 ಲಕ್ಷ ಕೋಟಿ ರೂ.ಗಳಷ್ಟು ಹಾನಿಯಾಗಿದೆ. 6 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ. ಆದರೂ ಕೇಂದ್ರ ಸರಕಾರ ಒಂದು ಬಿಡಿಗಾಸನ್ನು ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಂದು ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಸಿಎಂ ಯಡಿಯೂರಪ್ಪ ದಿಲ್ಲಿಗೆ ತೆರಳಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ರಾಜ್ಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಆದರೆ, ಕೇಂದ್ರ ಸರಕಾರ ರಾಜ್ಯಕ್ಕೆ ಹಣ ಬಿಡುಗಡೆಯ ಸಣ್ಣ ಸುಳಿವನ್ನೂ ನೀಡಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಒನ್‌ಮ್ಯಾನ್ ಶೋ ನಡೆಸುತ್ತಿದ್ದಾರೆ. ಈವರೆಗೂ ಸಚಿವ ಸಂಪುಟ ರಚನೆಯಾಗಿಲ್ಲ. ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೆ ಸ್ವಾತಂತ್ರೋತ್ಸವ ಧ್ವಜಾರೋಹಣ ನೆರವೇರಿಸಲಾಗಿದೆ ಎಂದು ಹೇಳಿದರು.

ತಕ್ಷಣವೇ ಘೋಷಣೆ: 2009ರಲ್ಲೂ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಪ್ರವಾಹ ಪರಿಸ್ಥಿತಿ ಅಧ್ಯಯನ ನಡೆಸಿದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸ್ಥಳದಲ್ಲೆ 1,600 ಕೋಟಿ ರೂ.ಘೋಷಣೆ ಮಾಡಿದ್ದರು. ಆದರೆ ಕೇಂದ್ರ ಸರಕಾರಕ್ಕೆ ಇದೀಗ ಏನಾಗಿದೆಯೋ ಗೊತ್ತಿಲ್ಲ ಎಂದು ಆಕ್ಷೇಪಿಸಿದರು.

ನೆರೆ ಹಾನಿ ಸಂಬಂಧ ರಾಜ್ಯ ಸರಕಾರ ಈವರೆಗೂ ಎಷ್ಟು ಪ್ರಮಾಣದ ಹಾನಿ ಸಂಭವಿಸಿದೆ ಎಂದು ವರದಿಯನ್ನು ಸಿದ್ದಪಡಿಸಿ ಕೇಂದ್ರಕ್ಕೆ ಲಿಖಿತವಾಗಿ ಸಲ್ಲಿಸಿಲ್ಲ ಎಂದ ಅವರು, ಮೋದಿ ಹಾಗೂ ಅಮಿತ್ ಶಾ ಅವರನ್ನು ಕಂಡರೆ ಯಡಿಯೂರಪ್ಪ ಗಡಗಡ ನಡುಗುತ್ತಾರೆಂದು ಲೇವಡಿ ಮಾಡಿದರು.

ಸಚಿವ ಸಂಪುಟ ರಚನೆ ಸಂಬಂಧ ಅಮಿತ್ ಶಾ ಮರ್ಜಿಗಾಗಿ ಯಡಿಯೂರಪ್ಪ ಕಾಯುತ್ತಿದ್ದು, ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲ. ತನ್ನ ಅಂಗ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದ ಸಿದ್ದರಾಮಯ್ಯ, ಫೋನ್ ಕದ್ದಾಲಿಕೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News