ಪ್ರವಾಹ: ಎರಡು ದಿನಗಳೊಳಗೆ ಪರಿಹಾರ ವಿತರಣೆಗೆ ಸೂಚನೆ

Update: 2019-08-19 13:36 GMT

ಬಳ್ಳಾರಿ, ಆ.19: ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಎರಡು ದಿನದೊಳಗೆ ಪರಿಹಾರ ವಿತರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವಗುಪ್ತಾ ಸೂಚನೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಂತ್ರಸ್ತರಿಗೆ ಕೂಡಲೇ ಪರಿಹಾರ ವಿತರಿಸಬೇಕು ಎಂಬುದು ಮುಖ್ಯಮಂತ್ರಿ ಸೂಚನೆ. ಅದರಂತೆ ಜಿಲ್ಲೆಯ ತಾಲೂಕುಗಳಲ್ಲಿ ಉಂಟಾಗಿರುವ ಮನೆಗಳ ಹಾನಿಗೆ ಸಂಬಂಧಿಸಿದಂತೆ ಎರಡು ದಿನದೊಳಗೆ ಶೀಘ್ರ ಪರಿಹಾರ ವಿತರಿಸಿ ಎಂದು ತಿಳಿಸಿದರು.

ಮನೆಗಳ ಹಾನಿಗೆ ಸಂಬಂಧಿಸಿದಂತೆ ಈಗಾಗಲೇ ಗ್ರಾಮವಾರು ಪಟ್ಟಿಯನ್ನು ಶೇಕಡವಾರು ಹಾನಿಯ ಪ್ರಮಾಣದ ರೂಪದಲ್ಲಿ ಹಾಗೂ ಇದುವರೆಗೆ ವಿತರಿಸಲಾದ ಪರಿಹಾರ ಮತ್ತು ಇನ್ನೂ ವಿತರಿಸಬೇಕಾದ ಪರಿಹಾರದ ಮೊತ್ತಕ್ಕೆ ಸಂಬಂಧಿಸಿದ ಪಟ್ಟಿಯನ್ನು ಕೂಡಲೇ ಸಿದ್ಧಪಡಿಸಬೇಕು ಎಂದರು. ಮನೆ ಹಾನಿ ಪ್ರಮಾಣ ಮತ್ತು ಪರಿಹಾರದ ಮೊತ್ತ ನಿಗದಿಯಾಗಿದ್ದು, ಅದರಂತೆಯೇ ಆರ್‌ಟಿಜಿಎಸ್ ಮೂಲಕ ವಿತರಿಸಬೇಕು. ಪರಿಹಾರ ವಿತರಿಸುವಾಗ ಮಹಜರು ಮಾಡಬೇಕು. ಫೋಟೊ, ಮನೆ ವಿವರ ಪಡೆದುಕೊಳ್ಳಬೇಕು ಎಂದು ಹೇಳಿದರು.

ನೆರೆಯಿಂದ ಮನೆಯೊಳಗಿನ ಬಟ್ಟೆ, ಪಾತ್ರೆ ಹಾಗೂ ಪೀಠೋಪಕರಣಗಳಿಗೆ ಹಾನಿಯಾಗಿದ್ದರೆ 10 ಸಾವಿರ ಪರಿಹಾರ ನೀಡಬಹುದು, ಅದನ್ನು ಇಂದೇ ವಿತರಿಸಿ ಎಂದು ಸೂಚಿಸಿದರು.

ಹೊಸಪೇಟೆ, ಕಂಪ್ಲಿ ಮತ್ತು ಸಿರಗುಪ್ಪ ತಾಲೂಕಿನಲ್ಲಿ ಹಾನಿಯಾದ ಮನೆಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿ ಅನ್ವಯ ಪರಿಹಾರ ವಿತರಿಸಲು ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ಕ್ರಮವಹಿಸಬೇಕು ಎಂದು ತಿಳಿಸಿದರು.

ಹಡಗಲಿ ಮತ್ತು ಹರಪನಳ್ಳಿಯಲ್ಲಿ ಸಮರ್ಪಕವಾಗಿ ನೆರೆ ನಿರ್ವಹಣೆ ಮಾಡಲಾಗಿದೆ. ಪರಿಹಾರದ ವಿಷಯದಲ್ಲಿಯೂ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.

ಸಣ್ಣ ನೀರಾವರಿ ಮತ್ತು ಬೃಹತ್ ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆ ಸಂಬಂಧಿಸಿದಂತೆ ನೆರೆಯಿಂದ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ನಿತೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News