ಉ.ಕ. ಭಾಗದಲ್ಲಿ ಪ್ರವಾಹದಿಂದ 2 ಕೋಟಿ ಜನರ ಜೀವನ ಅಸ್ತವ್ಯಸ್ತ: ಈಶ್ವರ್ ಖಂಡ್ರೆ

Update: 2019-08-19 14:21 GMT

ಬೆಂಗಳೂರು, ಆ.19: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದಿಂದ 2 ಕೋಟಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಹೈದ್ರಾಬಾದ್ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಐದು ಜಿಲ್ಲೆಗಳು ಪ್ರವಾಹದಿಂದ ನಲುಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 22 ಜಿಲ್ಲೆಗಳು, 103 ತಾಲೂಕುಗಳು ಪ್ರವಾಹ ಪೀಡಿತವಾಗಿವೆ. ಇದೊಂದು ರಾಷ್ಟ್ರೀಯ ವಿಪತ್ತು. ಇದನ್ನು ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಬೇಕೆಂದು ಆಗ್ರಹಿಸಿದರು.

30 ಲಕ್ಷ ಎಕರೆ ಪ್ರದೇಶ ಹಾನಿಗೊಳಗಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಲು ಜಿಲ್ಲಾಡಳಿತ ಸಮಿತಿ ರಚನೆ ಮಾಡಬೇಕು. ಆ ಸಮಿತಿಯ ವರದಿಯನ್ನು ವಿಮಾ ಕಂಪನಿಗಳಿಗೆ ಸಲ್ಲಿಸಬೇಕು ಎಂದು ಅವರು ಹೇಳಿದರು.

ಸಂಕಷ್ಟದಲ್ಲಿರುವ ರೈತರಿಗೆ 15 ದಿನಗಳ ಒಳಗೆ ಶೇ.25ರಷ್ಟು ಪರಿಹಾರ ಹಣವನ್ನು ವಿಮಾ ಕಂಪನಿಗಳು ನೀಡಬೇಕು. ವಿಮಾ ಕಂಪನಿಗಳು ರೈತರ ಖಾತೆಗಳಿಗೆ ಕನಿಷ್ಠ ಎಕರೆಗೆ 20 ಸಾವಿರ ರೂ.ಗಳನ್ನು ಜಮೆ ಮಾಡಬೇಕು ಎಂದು ಈಶ್ವರ್ ಖಂಡ್ರೆ ಹೇಳಿದರು.

ಹೈ.ಕ.ಭಾಗದ ಆರು ಜಿಲ್ಲೆಗಳೊಂದಿಗೆ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ಕೊಡಗಿನ ವಿರಾಜಪೇಟೆಗೂ ನಾವು ಭೇಟಿ ನೀಡಿದ್ದೆವು. ಎಲ್ಲ ಕಡೆಯೂ ಪ್ರವಾಹದಿಂದ ಸಾಕಷ್ಟು ನಷ್ಟವಾಗಿದೆ. 76 ಜನ ಮೃತಪಟ್ಟಿದ್ದಾರೆ. 10 ಮಂದಿ ಕಣ್ಮರೆಯಾಗಿದ್ದಾರೆ. ಸಾವಿರಾರು ಜಾನುವಾರು ಅಸುನೀಗಿವೆ ಎಂದು ಅವರು ತಿಳಿಸಿದರು.

ನೂರಾರು ಹಳ್ಳಿಗಳು ಮುಳುಗಡೆಯಾಗಿವೆ. ಹಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಹಲವು ಕಡೆ ಪ್ರಮುಖ ರಸ್ತೆಗಳೇ ಹಾನಿಯಾಗಿವೆ. ನೆರೆ, ಪ್ರವಾಹ ಪರಿಸ್ಥಿತಿ ಎದುರಿಸುವಲ್ಲಿ ಸರಕಾರ ಕೈಗೊಂಡಿರುವ ಕ್ರಮಗಳು ತೃಪ್ತಿಕರವಾಗಿಲ್ಲ. ಕೇವಲ ಕಾಗದದ ಮೇಲೆ ಕ್ರಮವಾಗುತ್ತಿದೆ. ವಾಸ್ತವವಾಗಿ ಕ್ರಮ ಆಗಬೇಕು ಎಂದು ಅವರು ಹೇಳಿದರು.

ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ಮಾತನಾಡಿ, ಜಮಖಂಡಿಯಲ್ಲಿ 30 ಸಾವಿರ ಎಕರೆ ಕಬ್ಬು ಬೆಳೆಯಲಾಗಿತ್ತು. ಅದರಲ್ಲಿ 20 ಸಾವಿರ ಎಕರೆ ಕಬ್ಬು ಹಾಳಾಗಿದೆ. ಇದರಿಂದಾಗಿ, 300 ಕೋಟಿ ರೂ.ನಷ್ಟವಾಗಿದೆ. ಕಬ್ಬು ವಾಣಿಜ್ಯ ಬೆಳೆ ಅಂತ ಕೇಂದ್ರ ಸರಕಾರ ಗುರುತಿಸಿದೆ. ಹೀಗಾಗಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಇದಕ್ಕೆ ಅನ್ವಯಿಸುವುದಿಲ್ಲ. ಕಬ್ಬು ಬೆಳೆದ ರೈತರಿಗೆ ವಿಮೆ ಇಲ್ಲದೆ ಅನ್ಯಾಯವಾಗಿದೆ ಎಂದರು.

ಕಬ್ಬನ್ನೂ ವಿಮೆಯ ವ್ಯಾಪ್ತಿಯಡಿಯೇ ತರಬೇಕು. ರಾಜ್ಯ ಸರಕಾರ ಕೂಡಲೇ ಇದರ ಬಗ್ಗೆ ಗಮನಹರಿಸಬೇಕು. ಅಲ್ಲದೇ, ಪ್ರತಿ ಟನ್ ಕಬ್ಬಿಗೆ 2,500 ರೂ. ಪರಿಹಾರ ನೀಡಬೇಕು ಎಂದು ಆನಂದ್ ನ್ಯಾಮಗೌಡ ಆಗ್ರಹಿಸಿದರು.

ಆಪರೇಷನ್ ಕಮಲವೂ ತನಿಖೆಯಾಗಲಿ

ಫೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಹೇಳಿಕೆಗಳಲ್ಲಿ ಯಾವುದೇ ಗೊಂದಲ ಇಲ್ಲ. ನಿಷ್ಪಕ್ಷಪಾತ ತನಿಖೆ ಮಾಡಬೇಕೆಂದು ನಾವು ಆಗ್ರಹ ಮಾಡುತ್ತೇವೆ. ಮುಖ್ಯಮಂತ್ರಿ ಯಡಿಯೂರಪ್ಪಸದನದಲ್ಲಿ ದ್ವೇಷದ ರಾಜಕೀಯ ಮಾಡುವುದಿಲ್ಲ ಎಂದಿದ್ದರು. ಈಗ ನೋಡಿದರೆ ಅವರು ದ್ವೇಷದ ರಾಜಕೀಯ ಮಾಡುತ್ತಿರುವುದು ಗೊತ್ತಾಗುತ್ತಿದೆ. ಫೋನ್ ಕದ್ದಾಲಿಕೆ ಜೊತೆಗೆ ಆಪರೇಷನ್ ಕಮಲದ ಮೂಲಕ ನಡೆದಿರುವ ಕುದುರೆ ವ್ಯಾಪಾರದ ಬಗ್ಗೆಯೂ ತನಿಖೆ ಆಗಬೇಕು.

-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News