ಪ್ರವಾಹ ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸಲು ಕೇಂದ್ರ ಸಚಿವ ಸುರೇಶ್ ಅಂಗಡಿ ಸೂಚನೆ

Update: 2019-08-19 14:23 GMT

ಬೆಳಗಾವಿ, ಆ.19: ಪ್ರವಾಹ ಮತ್ತು ಮಳೆಯಿಂದಾಗಿ ಬಡವರು ಮನೆ ಕಳೆದುಕೊಂಡಿರುವುದರಿಂದ ಬರೀ ನಿಯಮಾವಳಿ ಪಾಲನೆಗೆ ಒತ್ತು ನೀಡದೇ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರವಾಹ ಸಂತ್ರಸ್ತರ ಪುನರ್ವಸತಿ ಹಾಗೂ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಹಾಗೂ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ತಕ್ಷಣಕ್ಕೆ ನೀಡಲಾಗುವ ಹತ್ತು ಸಾವಿರ ರೂ.ಗಳ ಚೆಕ್‌ಗಳನ್ನು ಕಡ್ಡಾಯವಾಗಿ ಕುಟುಂಬದ ಮಹಿಳೆಯರ ಹೆಸರಿಗೆ ನೀಡಬೇಕು ಎಂದು ಅವರು ಹೇಳಿದರು.

ಪರಿಹಾರ ಕೇಂದ್ರಗಳಲ್ಲಿ ಇರುವ ಸಂತ್ರಸ್ತರು ತಮ್ಮ ತಮ್ಮ ಮನೆಗೆ ಹಿಂದಿರುಗುವ ಮುಂಚೆ ಅವರಿಗೆ ನೀಡಬೇಕಾದ ಪರಿಹಾರದ ಚೆಕ್‌ಗಳನ್ನು ಕೂಡಲೇ ತಲುಪಿಸುವಂತೆ ಸೂಚನೆ ನೀಡಿದ ಅವರು, ಮನೆ ಕಳೆದುಕೊಂಡಿರುವ ಜನರಿಗೆ ಪರಿಹಾರ ನೀಡಲು ಸತಾಯಿಸಿದರೇ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜನರು ಮನೆಗಳನ್ನು ಕಳೆದುಕೊಂಡು ಹದಿನೈದು ದಿನಗಳಾದರೂ ಕೆಲವು ಕುಟುಂಬಗಳಿಗೆ ಇದುವರೆಗೆ ಪರಿಹಾರ ನೀಡದಿರುವ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರಲ್ಲದೇ ಕೂಡಲೇ ಚೆಕ್‌ಗಳನ್ನು ವಿತರಿಸಿ ವರದಿ ನೀಡುವಂತೆ ಸುರೇಶ್ ಅಂಗಡಿ ತಿಳಿಸಿದರು.

ತುಮ್ಮರಗುದ್ದಿ ಗ್ರಾಮದಲ್ಲಿ 22 ಮನೆಗಳು ಸಂಪೂರ್ಣ ಕುಸಿದಿವೆ. ಆದಾಗ್ಯೂ ಇದುವರೆಗೆ ಒಬ್ಬರಿಗೂ ಚೆಕ್ ನೀಡದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಈಗಾಗಲೇ ವಿಳಂಬವಾಗಿರುವುದರಿಂದ ಸಂಸದರು, ಶಾಸಕರು ಅಥವಾ ಅಧಿಕಾರಿಗಳನ್ನು ಕಾಯದೇ ಅರ್ಹ ಸಂತ್ರಸ್ತರಿಗೆ ಪರಿಹಾರ ತಲುಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾಡಳಿತದ ಕೆಲಸ-ಮೆಚ್ಚುಗೆ: ಪ್ರವಾಹ ಸಂದರ್ಭದಲ್ಲಿ ಜನರ ರಕ್ಷಣೆ, ಸ್ಥಳಾಂತರ ಹಾಗೂ ಪುನರ್ವಸತಿ ನಿಟ್ಟಿನಲ್ಲಿ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ. ಮುಖ್ಯಮಂತ್ರಿ ಇತ್ತೀಚೆಗೆ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಸುರೇಶ್ ಅಂಗಡಿ ತಿಳಿಸಿದರು.

ಪ್ರವಾಹ ಹಾಗೂ ಮಳೆಯಿಂದ ಮನೆ ಕುಸಿದಿರುವ ಬಗ್ಗೆ ಬರುವ ಶುಕ್ರವಾರದೊಳಗೆ ಸಮೀಕ್ಷೆ ನಡೆಸಿ, ಸಮಗ್ರ ಪಟ್ಟಿಯನ್ನು ತಯಾರಿಸಿದ ಬಳಿಕ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು ಎಂದು ಉಪ ವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪತಿಳಿಸಿದರು.

ತಹಶೀಲ್ದಾರ್ ಮಂಜುಳಾ ನಾಯಕ ಮಾತನಾಡಿ, ಸಂತ್ರಸ್ತರಿಗೆ ನೀಡಬೇಕಾಗಿರುವ ತಕ್ಷಣದ ಹತ್ತು ಸಾವಿರ ರೂ.ಪರಿಹಾರದ ಮೊದಲ ಕಂತು 3800 ರೂ.ಚೆಕ್ ಅನ್ನು ಅನೇಕ ಜನರಿಗೆ ನೀಡಲಾಗಿದೆ. ಉಳಿದ 6200 ರೂ.ಮೊತ್ತದ ಚೆಕ್ ನೀಡುವ ಕೆಲಸ ಭರದಿಂದ ನಡೆದಿದೆ ಎಂದು ಅವರು ವಿವರಣೆ ನೀಡಿದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮದಲ್ಲಿ ಮನೆ ಕಳೆದುಕೊಂಡಿರುವ ಕುಟುಂಬಗಳ ಮಾಹಿತಿ ಇಂದು ಸಂಜೆಯೇ ನೀಡಿದರೆ ತಕ್ಷಣವೇ ಪರಿಹಾರ ಚೆಕ್ ನೀಡಲಾಗುವುದು ಎಂದು ಅವರು ತಿಳಿಸಿದರು.

ಯಮಕನಮರಡಿ ಹಾಗೂ ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆ ಕುಸಿದಿರುವ ಬಗ್ಗೆ ಹಾಗೂ ಪರಿಹಾರ ವಿತರಣೆ ಕುರಿತು ಸಚಿವರು ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತ(ಕಂದಾಯ)ಎಸ್.ಬಿ.ದೊಡಗೌಡರ, ಬೆಳಗಾವಿ ಗ್ರೇಡ್-2 ತಹಶಿಲ್ದಾರ್ ವಿ.ಎಮ್.ಗೊಟೇಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News