ರಾಜ್ಯದಲ್ಲಿ ಈ ಬಾರಿ ವಿದ್ಯುತ್ ಕೊರತೆ ಸಾಧ್ಯತೆ ಕಡಿಮೆ !

Update: 2019-08-19 14:39 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.19: ಸರಿಯಾದ ಮಳೆಯಾಗದೇ ನೀರಿನ ತೀವ್ರ ಅಭಾವ ಎದುರಿಸಿದ್ದ ಜಲ ವಿದ್ಯುತ್ ಯೋಜನೆಗಳ ಜಲಾಶಯಗಳಿಗೆ ಅಪಾರವಾದ ನೀರು ಹರಿದು ಬಂದಿದ್ದು, ಮರು ಜೀವ ಬಂದಂತಾಗಿದೆ. ಹೀಗಾಗಿ, ಈ ಬಾರಿಯ ಬೇಸಿಗೆಗೆ ವಿದ್ಯುತ್ ಕೊರತೆಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ.

ಜೂನ್, ಜುಲೈನಲ್ಲಿ ರಾಜ್ಯದಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಜಲ ವಿದ್ಯುತ್ ಯೋಜನೆಗಳ ಜಲಾಶಯಗಳು ಮಂಕುಕವಿದಂತಾಗಿತ್ತು. ಆದರೆ, ಆಗಸ್ಟ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಸುರಿದ ಮಳೆಗೆ ಡ್ಯಾಂಗಳು ತುಂಬಿದ್ದು, ಇದೀಗ ವಿದ್ಯುತ್ ಸರಬರಾಜು ಮಾಡುವ ಜಲಾಶಯಗಳಿಗೆ ಮರು ಜೀವಬಂದಂತಾಗಿದೆ.

ಮಹಾರಾಷ್ಟ್ರದಲ್ಲಿ ಅಧಿಕ ಮಳೆಯಾದ ಹಿನ್ನೆಲೆಯಲ್ಲಿ ಅಲ್ಲಿನ ನದಿಗಳಿಂದ ನೀರು ಬಿಟ್ಟಿದ್ದರಿಂದ ರಾಜ್ಯದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿತ್ತು. ಅಲ್ಲದೆ, ಅನೇಕ ಜಲಾಶಯಗಳು ಭರ್ತಿಯಾಗಿವೆ. ಇದರಿಂದ ನೀರಿನ ಬರ ನೀಗಿದೆ. 2019-20 ನೆ ವರ್ಷಕ್ಕೆ 76,598 ದಶಲಕ್ಷ ಯೂನಿಟ್ ವಿದ್ಯುತ್ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಇಷ್ಟು ಪ್ರಮಾಣದ ವಿದ್ಯುತ್‌ಗೆ ಈ ವರ್ಷ ಕೊರತೆ ಉಂಟಾಗುವುದಿಲ್ಲ ಎಂದು ಇಂಧನ ಇಲಾಖೆ ಅಂದಾಜಿಸಿದೆ.

ಜಲವಿದ್ಯುತ್ ಯೋಜನೆಗಳು, ಉಷ್ಣ ವಿದ್ಯುತ್ ಸ್ಥಾವರ, ಪವನ ವಿದ್ಯುತ್ ಘಟಕಗಳು ರಾಜ್ಯದ ವಿದ್ಯುತ್ ಬೇಡಿಕೆ ಪೂರೈಸುತ್ತಿವೆ. ಇನ್ನುಳಿದಂತೆ ಕೇಂದ್ರ ಸರಕಾರದಿಂದ ಲಭ್ಯವಾಗುವ ನಮ್ಮ ಪಾಲು ಧೀರ್ಘಾವಧಿ ಟೆಂಡರ್‌ನಲ್ಲಿ ಬರುತ್ತಿರುವುದರಿಂದ ನಾಡಿನ ವಿದ್ಯುತ್ ಬರ ನೀಗುತ್ತಿದೆ.

ಕಳೆದ ಐದು ವರ್ಷಗಳಿಂದ ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಕಾಣಿಸಿಕೊಂಡಿದ್ದರಿಂದ ಅಲ್ಪಾವಧಿ ಟೆಂಡರ್ ಮೂಲಕ ವಿದ್ಯುತ್ ಕೊಂಡುಕೊಳ್ಳುವ ಕೆಲಸವನ್ನು ಮಾಡಲಾಗಿತ್ತು. ಕಳೆದ ವರ್ಷ ಸ್ವಲ್ಪಮಟ್ಟಿಗೆ ಪರಿಸ್ಥಿತಿ ಸುಧಾರಿಸಿತ್ತು. ಬೇರೆ ಮೂಲದ ಉತ್ಪಾದನೆಗೆ ಪ್ರತಿ ಯೂನಿಟ್‌ಗೆ ಕನಿಷ್ಠ 3 ರಿಂದ 6 ರೂ. ವೆಚ್ಚವಾಗುತ್ತಿದೆ.

ಕಿರು ಜಲ ವಿದ್ಯುತ್: ಪ್ರವಾಹ ರೂಪದಲ್ಲಿ ಮಳೆ ಬಂದ ಕಾರಣ ಕಿರು ಜಲ ವಿದ್ಯುತ್ ಯೋಜನೆಗಳಿಗೂ ಜೀವಕಳೆ ಬಂದಿದ್ದು, ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿದೆ.

ಬೇಸಿಗೆಯಲ್ಲಿ ಬೇಡಿಕೆ ಅಧಿಕ: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ ಕನಿಷ್ಟ 150 ದಶಲಕ್ಷ ಯೂನಿಟ್, ಗರಿಷ್ಠ 210 ದಶಲಕ್ಷ ಯೂನಿಟ್ ಇದೆ. ಬೇಸಿಗೆಯಲ್ಲಿ ಬೇಡಿಕೆ ಪ್ರಮಾಣ ಅಧಿಕವಾಗುವುದರಿಂದ ಆ ಸಂದರ್ಭದಲ್ಲಿ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಈ ಬಾರಿ ಜಲಾಶಯಗಳಲ್ಲಿ ನೀರು ಸಂಗ್ರಹವಾಗಿದ್ದರಿಂದ ಯಾವುದೇ ಸಮಸ್ಯೆ ಉದ್ಭವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News