ಸಂಸದ ಪ್ರಜ್ವಲ್‌ಗೆ ರಾಜೀನಾಮೆ ನೀಡದಂತೆ ನಿರ್ದೇಶಿಸಿ: ಹೈಕೋರ್ಟ್‌ಗೆ ಎ.ಮಂಜು ಅರ್ಜಿ

Update: 2019-08-19 16:15 GMT

ಬೆಂಗಳೂರು, ಆ.19: ಹಾಸನ ವಿಧಾನಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ಇತ್ಯರ್ಥವಾಗುವ ತನಕ ಪ್ರಜ್ವಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ನಿರ್ದೇಶಿಸಬೇಕು ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿತಂತೆ ಪರಾಜಿತ ಬಿಜೆಪಿ ಅಭ್ಯರ್ಥಿ ಎ.ಮಂಜು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಪ್ರಕರಣದಲ್ಲಿ ನ್ಯಾಯಪೀಠ ಜಾರಿಗೊಳಿಸಿರುವ ಸಮನ್ಸ್ ಅನ್ನು ಪ್ರಜ್ವಲ್ ಇನ್ನೂ ಸ್ವೀಕರಿಸಿಲ್ಲ ಮತ್ತು ಉಳಿದ ಪ್ರತಿವಾದಿಗಳು ಲಿಖಿತ ಆಕ್ಷೇಪಣೆ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 3ಕ್ಕೆ ಮುಂದೂಡಿದೆ.

ಏನಿದು ಅರ್ಜಿ: ನಾನು 2019ರ ಜೂನ್ 26ರಂದು ಚುನಾವಣಾ ತಕರಾರು ಅರ್ಜಿ ಸಲ್ಲಿಸಿ ಪ್ರಜ್ವಲ್ ಆಯ್ಕೆಯನ್ನು ಅಸಿಂಧು ಎಂದು ಘೋಷಿಸುವಂತೆ ಕೋರಿದ್ದೇನೆ. ಈ ಅರ್ಜಿಯಲ್ಲಿ ಆಕ್ಷೇಪಿಸಿರುವ ಅಂಶಗಳ ಗಂಭೀರತೆ ಅರಿತೇ ಪ್ರಜ್ವಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಮಾಧ್ಯಮಗಳು ಈಗಾಗಲೇ ಇದನ್ನು ವರದಿ ಮಾಡಿವೆ ಎಂದು ಮಂಜು ಈ ಮಧ್ಯಂತರ ಅರ್ಜಿಯಲ್ಲಿ ವಿವರಿಸಿದ್ದಾರೆ. ಒಂದು ವೇಳೆ ಪ್ರಜ್ವಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ನನ್ನ ಮೂಲ ಅರ್ಜಿಯೇ ನಿಷ್ಫಲವಾಗುತ್ತದೆ. ಅಷ್ಟೇ ಅಲ್ಲ, ವ್ಯಾಜ್ಯದಲ್ಲಿ ಪ್ರಜ್ವಲ್ ಸೋತರೆ ನನ್ನನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಬೇಕಾಗುತ್ತದೆ. ಹೀಗಾಗಿ ಇದನ್ನು ತಡೆಯುವ ಉದ್ದೇಶದಿಂದ ಅವರು ರಾಜೀನಾಮೆ ನೀಡುವ ನಿರ್ಧಾರ ಹೊಂದಿದ್ದಾರೆ. ಹೀಗಾಗಿ, ಸಾಧ್ಯವಾದಷ್ಟು ಶೀಘ್ರ ಈ ಮಧ್ಯಂತರ ಅರ್ಜಿ ವಿಚಾರಣೆ ನಡೆಸಬೇಕು ಮತ್ತು ಅವರು ರಾಜೀನಾಮೆ ನೀಡದಂತೆ ಆದೇಶಿಸಬೇಕು ಎಂದು ಮಂಜು ಕೋರಿದ್ದಾರೆ.

ಅಪರೂಪದ ಅರ್ಜಿ: ಸಾಮಾನ್ಯವಾಗಿ ಚುನಾವಣಾ ತಕರಾರು ಅರ್ಜಿಗಳಲ್ಲಿ ಇಂತಹ ಕೋರಿಕೆಯುಳ್ಳ ಮಧ್ಯಂತರ ಅರ್ಜಿ ಸಲ್ಲಿಕೆಯಾಗುವುದು ಅಪರೂಪ. ಆದರೆ, ಈ ಪ್ರಕರಣದಲ್ಲಿ ಇದೊಂದು ವಿರಳ ಮಧ್ಯಂತರ ಅರ್ಜಿಯಾಗಿದೆ ಎನ್ನುತ್ತಾರೆ ಎ.ಮಂಜು ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಜಿ.ಆರ್.ಗುರುಮಠ.

ಸದ್ಯದಲ್ಲೇ ಅನರ್ಹಗೊಂಡಿರುವ ಶಾಸಕರ ಸ್ಥಾನಕ್ಕೆ ಮಧ್ಯಂತರ ಚುನಾವಣೆ ನಡೆಯಲಿದ್ದು, ಈ ಮಧ್ಯಂತರ ಅರ್ಜಿ ರಾಜಕೀಯ ಕಾರಣಗಳಿಂದಲೂ ಮಹತ್ವ ಪಡೆದಿದೆ ಎಂಬುದು ಗುರುಮಠ ಅವರ ಅಭಿಮತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News