×
Ad

12 ಐಎಎಸ್, 8 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Update: 2019-08-19 23:02 IST

ಬೆಂಗಳೂರು, ಆ.19: ರಾಜ್ಯ ಸರಕಾರ ಮಂಗಳವಾರ ಸಚಿವ ಸಂಪುಟ ವಿಸ್ತರಣೆಯಾಗುತ್ತಿರುವ ಬೆನ್ನಲ್ಲೇ 12 ಐಎಎಸ್, 8 ಐಪಿಎಸ್, 16 ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಐಎಎಸ್: ಕೋಲಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಜಿ.ಜಗದೀಶ್‌ರನ್ನು ಉಡುಪಿ ಜಿಲ್ಲೆಯ ಉಪ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಲೀಲಾವತಿ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ನಿರ್ದೇಶಕರು, ಬೆಂಗಳೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿದ್ದ ಡಾ.ಅರುಂಧತಿ ಚಂದ್ರಶೇಖರ್‌ರನ್ನು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಡಾ.ಕೆ.ಕಲ್ಪನಾ ಅವರನ್ನು ಯುವಜನ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಡಾ.ಎನ್.ಮಂಜುಳಾರನ್ನು ಕೆಪಿಟಿಎಸ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ. ಡಾ.ಶ್ಯಾಮ್ಲಾ ಇಕ್ಬಾಲ್‌ರನ್ನು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳು ಇಲಾಖೆಯ ಆಯುಕ್ತರನ್ನಾಗಿ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮಂಡಳಿಯ ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಜಿ.ಎನ್.ಶಿವಮೂರ್ತಿಯನ್ನು ಬೆಂಗಳೂರು ನಗರ ಜಿಲ್ಲೆಯ ಉಪ ಆಯುಕ್ತರನ್ನಾಗಿ ನಿಯೋಜಿಸಲಾಗಿದೆ. ಪಿ.ಎನ್.ರವೀಂದ್ರರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಆರ್.ಎಸ್.ಪೆದ್ದಪ್ಪಯ್ಯ ಇವರನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರನ್ನಾಗಿ ನಿಯೋಜನೆ ಮಾಡಲಾಗಿದೆ. ಮಹಾಂತೇಶ್ ಬಿಳಗಿಯವರನ್ನು ದಾವಣಗೆರೆ ಜಿಲ್ಲೆಯ ಉಪ ಆಯುಕ್ತರನ್ನಾಗಿ ನಿಯೋಜಿಸಲಾಗಿದೆ. ಎಂ.ಎಸ್.ಅರ್ಚನಾರನ್ನು ರಾಮನಗರ ಜಿಲ್ಲೆಯ ಉಪ ಆಯುಕ್ತರನ್ನಾಗಿ ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.

ಐಪಿಎಸ್ ವರ್ಗಾವಣೆ: ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಐಜಿಪಿ ಹಾಗೂ ನಿರ್ದೇಶಕ ವಿಪುಲ್ ಕುಮಾರ್‌ರನ್ನು ಮೈಸೂರು ದಕ್ಷಿಣ ವಿಭಾಗದ ಐಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಡಾ.ರಾಮ್ ನಿವಾಸ್ ಸೆಪಟ್‌ರನ್ನು ಹಾಸನ ಜಿಲ್ಲೆಯ ಎಸ್ಪಿಯಾಗಿ ವರ್ಗಾಯಿಸಲಾಗಿದೆ. ಪಾಟೀಲ್ ವಿನಾಯಕ್ ವಸಂತರಾವ್‌ರನ್ನು ಕಲಬುರಗಿ ಜಿಲ್ಲೆಯ ಎಸ್ಪಿಯನ್ನಾಗಿ ಮಾಡಲಾಗಿದೆ. ಶಿವಪ್ರಕಾಶ್ ದೇವರಾಜುರನ್ನು ಉತ್ತರ ಕನ್ನಡದ ಎಸ್ಪಿಯಾಗಿ ವರ್ಗಾಯಿಸಲಾಗಿದೆ.
ಎಂ.ಎನ್.ನಾಗರಾಜುರನ್ನು ಬೆಂಗಳೂರಿನ ಮುಖ್ಯ ಕಚೇರಿಯ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ. ಆರ್.ದಿಲೀಪ್‌ರನ್ನು ಹುಬ್ಬಳ್ಳಿ-ಧಾರವಾಡದ ಡಿಐಜಿ ಮತ್ತು ಕಮೀಷನರ್ ಆಗಿ ವರ್ಗಾವಣೆ ಮಾಡಲಾಗಿದೆ. ಡಾ.ಸಂಜೀವ್ ಎಂ.ಪಾಟೀಲ್‌ರನ್ನು ಬೆಂಗಳೂರಿನ ಗುಪ್ತಚರ ಇಲಾಖೆಯ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಕೆಎಎಸ್‌ನ ಜಿ.ಎಲ್.ಪ್ರವೀಣ್ ಕುಮಾರ್, ಜಯಲಕ್ಷ್ಮಿ ಸೇರಿದಂತೆ 16 ಜನರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಹಾಗೂ 227 ಪಿಎಸ್‌ಐ(ಸಿವಿಲ್) ಹುದ್ದೆಯಿಂದ ಪಿಐ(ಸಿವಿಲ್) ಹುದ್ದೆಗೆ ಮುಂಬಡ್ತಿ ನೀಡಿ, ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News