ರಾಜಕಾರಣಿಗಳಿಗಿಂತ ಸಾಹಿತಿಗಳು ದೊಡ್ಡವರು: ಸಮ್ಮೇಳನಾಧ್ಯಕ್ಷ ಎಲ್.ಹನುಮಂತಯ್ಯ
ಕೋಲಾರ, ಆ.19: ಸಾಹಿತಿಗಳಿಗೆ ಮತ್ತು ರಾಜಕಾರಣಿಗಳಿಗೆ ವ್ಯತ್ಯಾಸವಿದ್ದು, ಇಬ್ಬರಿಗೂ ವಿವೇಕ ಇರಬೇಕು. ರಾಜಕಾರಣಿಗಳಿಗಿಂತ ಸಾಹಿತಿಗಳು ದೊಡ್ಡವರು ಎಂದು ಸಮ್ಮೇಳನಾಧ್ಯಕ್ಷ ಎಲ್.ಹನುಮಂತಯ್ಯ ತಿಳಿಸಿದರು.
ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ನಡೆದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಾಹಿತಿಗಳಿಗೆ ನಿರೀಕ್ಷೆ ಇರುವುದಿಲ್ಲ, ಆದರೆ ರಾಜರಾಣಿಗಳಿಗೆ ನಿರೀಕ್ಷೆಗಳು ಹೆಚ್ಚು ಇರುತ್ತವೆ, ಆದರೆ ವಸ್ತು ನಿಷ್ಠವಾಗಿ ಕೆಲಸ ಮಾಡಬೇಕು ಎಂದರು.
ಸಾಹಿತಿಗಳು, ಬರಹಗಾರರು ನೋವಿನ ಅನುಭವದ ಆಧಾರದ ಮೇಲೆ ಬರೆಯಬೇಕು. ಅದನ್ನು ಇಂತಹ ಸಮ್ಮೇಳನದಲ್ಲಿ ಗುರತಿಸಲು ಅವಕಾಶ ಕಲ್ಪಿಸುವ ಕೆಲಸ ಅಗಬೇಕು. ಎರಡು ದಿನಗಳಿಂದ ದಲಿತ ಸಾಹಿತ್ಯ, ಚಳವಳಿ, ಹೋರಾಟಗಳ ಬಗ್ಗೆ ವಿಚಾರ ನಡೆದಿದ್ದು, ಅದನ್ನು ಪ್ರತಿಯೊಬ್ಬರು ಅಲಿಸಿದ್ದಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದರು. ರಾಜ್ಯದಲ್ಲಿ ಅನೇಕ ಬರಹಗಾರರು ಇದ್ದಾರೆ. ಯಾವುದೇ ಪ್ರಯತ್ನ ನಡೆಸುವಾಗ ಟೀಕೆ, ಆರೋಪಗಳು ಬರುವುದು ಸಹಜ, ಯುವ ಬರಹಗಾರರು ಈಗಿನ ಸಮಾಜಕ್ಕೆ ಅಗತ್ಯವಿರುವ ವಿಚಾರಗಳ ಕುರಿತು ಸಾಹಿತ್ಯ ರಚಿಸುವ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.
ಹೋರಾಟಗಾರ ಇತಿಹಾಸದ ಬಗ್ಗೆ ದಾಖಲು ಮಾಡಬೇಕಾಗಿದೆ. ದಲಿತರ ಉದ್ಧಾರಕ್ಕಾಗಿ ಸ್ಥಿತಿಗಳು ಹಾಗೇ ಇದೆ ಎಂಬ ಚಿಂತನೆ ನಡೆಯಬೇಕು. ಸಮಾಜದಲ್ಲಿ ಮಲ ಹೊರುವಂತಹ ಅನಿಷ್ಠ ಪದ್ದತಿಗಳು ಈಗಲೂ ನಡೆಯುತ್ತಲೇ ಇವೆ. ಎಷ್ಟು ಮಂದಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸರ್ಕಾರದ ಅಂಕಿ ಅಂಶ ಹೇಳುತ್ತದೆ. ಆದರೆ ಅದರ ವಿರುದ್ಧ ಧ್ವನಿ ಎತ್ತುವರರ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂದು ವಿಷಾದಿಸಿದರು.
ವಿಧಾನ ಪರಿಷತ್ ಸದಸ್ಯ ಆರ್.ಚೌಡರೆಡ್ಡಿ ಮಾತನಾಡಿ, ದಲಿತ ಸಾಹಿತ್ಯ ರಚನೆ ಮಾಡಿರುವ ಸಾಹಿತಿಗಳು ಸಹ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡವರು ಇದ್ದಾರೆ. ಅವರ ಪ್ರಯತ್ನಗಳ ಬಗ್ಗೆ ಮುಂದಿನ ಪಿಳೀಗೆಗೆ ಪರಿಚಯಿಸುವ ಕೆಲಸ ಅಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸಮ್ಮೇಳನಗಳು ಸ್ಥಳೀಯ ಸಮಸ್ಯೆಗಳ ಜತೆಗೆ ಶೋಷಿತರ ಪರ ವಿಚಾರಗೋಷ್ಠಿಗಳು ನಡೆಯುತ್ತಿರುವುದು ಶ್ಲಾಘನೀಯ, ಚರ್ಚೆ ಜತೆಗೆ ಪರಿಹಾರ ಕಲ್ಪಿಸುವ ಕುರಿತು ಹಕ್ಕೊತ್ತಾಯ ಅಗಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಮನುಬಳಿಗಾರ್ ಮಾತನಾಡಿ, ಹಿಂದೆ ಸಾಹಿತ್ಯ ಪರಿಷತ್‍ನಿಂದ ಕೇಂದ್ರಕ್ಕೇ ನಿಯೋಗ ಹೋಗಿದ್ದಾಗ ಯಾರೂ ಸಹ ದಲಿತರಿಗೆ ಕೆಲಸ ಕೊಡಿ ಅಂತ ಕೇಳಲಿಲ್ಲ. ಕೇಂದ್ರಕ್ಕೆ ಹೋಗಿದ್ದ ನಿಯೋಗದಲ್ಲಿ ದಲಿತ ಸಾಹಿತಿಗಳು ಸಹ ಇದ್ದರೂ, ಮುಂದಿನ ಪಿಳೀಗೆಯ ಅನುಕೂಲಕ್ಕಾಗಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಬೇಕು ಎಂಬ ಉದ್ದೇಶವಿಟ್ಟುಕೊಂಡು ಮನವಿ ಮಾಡಿದರು ಎಂದರು.
ಇದುವರೆಗು 4 ಸಂಪುಟಗಳನ್ನು ಬಿಡುಗಡೆ ಮಾಡಿದ್ದು, ಉಳಿದ 6 ಸಂಪುಟಗಳಲ್ಲಿ 1 ಸಂಪುಟ ದಲಿತ ಹೋರಾಟಗಾರರಿಗೆ ಮೀಸಲಿಡಲಾಗಿದೆ. ಅದರಲ್ಲಿ ದಲಿತರಿಗಾಗಿ ಹೋರಾಟ ನಡೆಸಿದ ಹೋರಾಟಗಾರರ ಕುರಿತು ಮಾಹಿತಿ ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ಪಂಚಮ ಸಂಪುಟಗಳನ್ನು ಬಿಡುಗಡೆಗೊಳಿಸಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಜಿ.ವೆಂಕಟೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್, ಮುಖಂಡ ಸಿ.ಎಂ.ಮುನಿಯಪ್ಪ, ಟಿ.ವಿಜಿಕುಮಾರ್, ನಾರಾಯಣಸ್ವಾಮಿ ಹಾಜರಿದ್ದರು.