ಸಿ.ಪಿ.ಯೋಗೀಶ್ವರ್ ನಮ್ಮ ಕ್ಯಾಪ್ಟನ್: ಅನರ್ಹ ಶಾಸಕ ರಮೇಶ್ ಜಾರಕಿಹೊಳಿ

Update: 2019-08-21 14:31 GMT

ಹೊಸದಿಲ್ಲಿ, ಆ.21: ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ನಮ್ಮ ಕ್ಯಾಪ್ಟನ್(ನಾಯಕ). ಆದುದರಿಂದ, ಅವರು ನಮ್ಮ ಜೊತೆಯಲ್ಲಿಯೇ ಇದ್ದಾರೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.

ಮಂಗಳವಾರ ಹೊಸದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ನೆರೆ ಪರಿಸ್ಥಿತಿಯಿಂದಾಗಿ ಹೊಸದಿಲ್ಲಿಗೆ ಬರಲು ಸಾಧ್ಯವಾಗಿರಲಿಲ್ಲ. ಆದುದರಿಂದ, ಈಗ ಇಲ್ಲಿಗೆ ಬಂದು ವಕೀಲರಿಗೆ ಅಗತ್ಯವಿರುವ ಮಾಹಿತಿಯನ್ನು ನೀಡುತ್ತೇವೆ ಎಂದರು.

ಎಲ್ಲ ಅನರ್ಹ ಶಾಸಕರು ಒಟ್ಟಾಗಿ ನಾಳೆ ಸೇರುತ್ತೇವೆ. ನ್ಯಾಯಾಲಯ ನೀಡುವ ತೀರ್ಪು ತಡವಾದರೆ ಅದಕ್ಕೆ ಪೂರಕವಾಗಿ ಪ್ಲಾನ್-ಎ, ಪ್ಲಾನ್-ಬಿ ಸಿದ್ಧಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಚುನಾವಣೆ ಎದುರಿಸಲು ನನ್ನ ಸಹೋದರ, ಮಕ್ಕಳು ಅಥವಾ ಸಂಬಂಧಿಕರನ್ನು ಕಣಕ್ಕಿಳಿಸಲು ಯೋಜನೆ ಮಾಡಿಕೊಂಡಿದ್ದೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಸಚಿವ ಸಂಪುಟ ರಚನೆ ಬೆನ್ನಲ್ಲೆ ಬಿಜೆಪಿಯಲ್ಲಿ ಉಂಟಾಗಿರುವ ಅಸಮಾಧಾನಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಸಚಿವ ಸ್ಥಾನ ಹಂಚಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ. ನಾವು ಹೊಸದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡಲು ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿ ಸರಕಾರಕ್ಕೂ ನಮಗೂ ಸಂಬಂಧವಿಲ್ಲ. ನಾವು ಅನರ್ಹರಾಗಿದ್ದೇವೆ. ರಮೇಶ್ ಕುಮಾರ್ ಕಾನೂನು ಬಾಹಿರವಾಗಿ ನಮ್ಮನ್ನು ಅನರ್ಹಗೊಳಿಸಿದ್ದಾರೆ. ಬಿಜೆಪಿಯಲ್ಲಿನ ವಿಚಾರಗಳಿಗೂ ನಮಗೂ ಸಂಬಂಧವಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ನಾಳೆ ನಮ್ಮ ವಕೀಲರನ್ನು ಭೇಟಿಯಾಗಿ ಅವರಿಗೆ ಅಗತ್ಯವಿರುವ ಮಾಹಿತಿಯನ್ನು ನೀಡಿದ ಬಳಿಕ, ಬೆಂಗಳೂರಿಗೆ ವಾಪಸ್ ಆಗುತ್ತೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕೆಂದು ಹೋರಾಟ ಮಾಡಿದ್ದೇನೆಯೇ ಹೊರತು, ಸಚಿವ ಸ್ಥಾನದ ಆಸೆಗಾಗಿ ಪ್ರಯತ್ನ ಮಾಡಿಲ್ಲ. ಸರಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದಾಕ್ಷಣ ಮಂತ್ರಿಯಾಗಬೇಕೇಂದಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನಾನು ಕೆಲಸ ಮಾಡಿದ್ದೇನೆ ಎಂದರು.

ಅನರ್ಹ ಶಾಸಕರು ನಮ್ಮ ಗೆಳೆಯರು. ಕಾನೂನು ಹೋರಾಟದಿಂದ ಸ್ವಲ್ಪ ಆತಂಕಕ್ಕೆ ಒಳಗಾಗಿದ್ದಾರೆ. ಅವರಿಗೆ ನೈತಿಕವಾಗಿ ಸಹಕಾರ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಿದೆ. ಇನ್ನು ಅರ್ಧ ಆಗಬೇಕಿದೆ. ಬಿಜೆಪಿ ಸರಕಾರ ನಮ್ಮ ಸರಕಾರ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಯಡಿಯೂರಪ್ಪ ನಮ್ಮ ನಾಯಕ. ನಮ್ಮ ಪಕ್ಷ ಬಲಿಷ್ಠವಾಗಿದೆ. ಸರಕಾರ ತನ್ನ ಅವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News