ಸಂತ್ರಸ್ತ ಕುಟುಂಬಕ್ಕೆ ತಕ್ಷಣವೇ ಪರಿಹಾರ ವಿತರಿಸಲು ಜಗದೀಶ್ ಶೆಟ್ಟರ್ ಸೂಚನೆ

Update: 2019-08-21 15:46 GMT

ಧಾರವಾಡ, ಆ.21: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಕುಟುಂಬ ಹಾಗೂ ಮನೆಯಲ್ಲಿನ ಸಾಮಗ್ರಿಗಳನ್ನು ಕಳೆದುಕೊಂಡವರಿಗೆ 10 ಸಾವಿರ ರೂ.ಗಳನ್ನು ತಕ್ಷಣವೇ ವಿತರಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ನೂತನ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಬುಧವಾರ ಅಳ್ನಾವರ ಸಮೀಪದ ಹೂಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅತಿವೃಷ್ಟಿಯಿಂದ ಮನೆ ಅರ್ಧ ಭಾಗ ಕುಸಿತಗೊಂಡಿದ್ದರೆ 1 ಲಕ್ಷ ರೂ. ಹಾಗೂ ಪೂರ್ಣ ಪ್ರಮಾಣದಲ್ಲಿ ಮನೆ ಹಾನಿಯಾಗಿದ್ದರೆ 5 ಲಕ್ಷ ರೂ.ಪರಿಹಾರ ನೀಡಲು ರಾಜ್ಯ ಸರಕಾರ ನಿರ್ಣಯ ಕೈಗೊಂಡಿದೆ ಎಂದರು. ಈಗಾಗಲೇ ಕೇಂದ್ರ ಸರಕಾರ 1 ಸಾವಿರ ಕೋಟಿ ರೂ.ಗಳ ಪರಿಹಾರ ಕಾರ್ಯಗಳಿಗೆ ಬಿಡುಗಡೆ ಮಾಡಿದೆ. ಇನ್ನೂ ಹೆಚ್ಚಿನ ಹಣ ನೀಡಲಿದೆ. 25-30 ವರ್ಷಗಳ ನಂತರ ನೆರೆ ಹಾವಳಿ ಜಿಲ್ಲೆಯಲ್ಲಿ ಉಂಟಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ಹಾನಿಯಾಗಿದ್ದು, ಪರಿಹಾರ ಒದಗಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕ್ಯಾಬಿನೆಟ್ ಸಭೆ ನಡೆಸಿ ಎಲ್ಲ ಸಚಿವರಿಗೆ ಎರಡು ದಿನಗಳ ಕಾಲ ನೆರೆ ಪ್ರದೇಶಗಳಗೆ ಭೇಟಿ ನೀಡಿ ವಾಸ್ತವತೆಯನ್ನು ಪರಿಶೀಲಿಸಿ ಶೀಘ್ರವೇ ಪರಿಹಾರ ಒದಗಿಸುವ ಕಾರ್ಯ ಮಾಡುವಂತೆ ಸೂಚಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆಯು ಸುಮಾರು 700 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಭಾಗದಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಒಂದು ವೇಳೆ ಕೆರೆ ಒಡೆದರೆ ಇಡೀ ಅಳ್ನಾವರ ಪಟ್ಟಣ ಮುಳುಗಡೆಯಾಗುತ್ತದೆ. ಅಲ್ಲದೆ ಹಳಿಯಾಳ ಪ್ರದೇಶಕ್ಕೂ ಹಾನಿಯಾಗುತ್ತದೆ. ಹೀಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಯೋಜನೆ ರೂಪಿಸಬೇಕೆಂದು ಇಂಜಿನಿಯರುಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.

ಜಿಲ್ಲೆಯ ವಿವಿಧ ಭಾಗಗಳಲ್ಲಿ ರಸ್ತೆ ಸಂಪರ್ಕ ಕಡಿತವಾಗಿದ್ದು, ಶೀಘ್ರವೇ ರಸ್ತೆಯನ್ನು ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು. ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರಕಾರದ ಅಧಿಕಾರಿಗಳ ತಂಡ ರಾಜ್ಯಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವ ಮುನ್ನವೇ ಕೇಂದ್ರ ಸರಕಾರ ಮುಂಗಡವಾಗಿ ಹಣ ನೀಡಿದೆ. ವರದಿ ನಂತರ ಹೆಚ್ಚಿನ ನೆರವು ದೊರೆಯಲಿದೆ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ಜಗದೀಶ್ ಶೆಟ್ಟರ್ ಅಳ್ನಾವರ ಪಟ್ಟಣದ ದೇಸಾಯಿ ಚಾಳ, ಟಿಳಕ ನಗರ, ಡೌಗಿ ನಾಲಾ ಮತ್ತಿತರ ಪ್ರದೇಶಗಳಲ್ಲಿ ಅತಿವೃಷ್ಟಿಯಿಂದ ಬಾಧಿತವಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಸಕ ಅಮೃತ ದೇಸಾಯಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ, ಜಿಲ್ಲಾಧಿಕಾರಿ ದೀಪಾ ಚೋಳನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News