ವಿದ್ಯಾರ್ಥಿ ವೇತನ ವಿಳಂಬ: ಸಿಎಫ್‌ಐ ಖಂಡನೆ

Update: 2019-08-21 15:52 GMT

ಬೆಂಗಳೂರು, ಆ.21: ಸರಕಾರದಿಂದ ಪ್ರತಿ ವರ್ಷ ನೀಡುವ ಪೋಸ್ಟ್ ಮೆಟ್ರಿಕ್, ಪ್ರೀ ಮೆಟ್ರಿಕ್ ಅರಿವು ಹಾಗೂ ವಿದ್ಯಾಸಿರಿಯಂತಹ ವಿದ್ಯಾರ್ಥಿ ವೇತನಗಳನ್ನು ರಾಜ್ಯದ ಹಲವು ವಿದ್ಯಾರ್ಥಿಗಳಿಗೆ ಮಂಜೂರಾಗದೆ ಇರುವುದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಖಂಡಿಸಿದೆ.

ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರಕಾರವು ಎಲ್ಲ ವಿದ್ಯಾರ್ಥಿ ವೇತನವನ್ನು ಆನ್‌ಲೈನ್ ಸೇವೆ ಮಾಡಿ, ಪ್ರೀ ಮೆಟ್ರಿಕ್ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳನ್ನ ಇನ್ನಷ್ಟು ಸಂಕಷ್ಟಕ್ಕೆಡು ಮಾಡಿದೆ. 2017-18 ಮತ್ತು 19 ನೇ ಸಾಲಿನ ಹಲವು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಬಾಕಿಯಿಟ್ಟುಕೊಂಡು ವಂಚನೆ ಮಾಡುತ್ತಿದೆ.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕುವ ಸಂದರ್ಭದಲ್ಲೂ ಹಲವು ತಾಂತ್ರಿಕ ದೋಷಗಳು ಎದುರಿಸುತ್ತಿದ್ದು, ಅರ್ಜಿಯ ಪರಿಶೀಲನೆ ನಂತರ ವಿದ್ಯಾರ್ಥಿಗಳಿಗೆ ಸಿಗಬೇಕಾದ ವಿದ್ಯಾರ್ಥಿ ವೇತನದಲ್ಲೂ ವಿಳಂಬ ಮಾಡುತ್ತಿದೆ. ಶೈಕ್ಷಣಿಕ ವರ್ಷದ ಕೊನೆ ಅಂದರೆ ಡಿಸೆಂಬರ್ ಜನವರಿ ಒಳಗಡೆ ಬರಬೇಕಾದ ವಿದ್ಯಾರ್ಥಿವೇತನ ಹೊಸ ವರ್ಷ ಆರಂಭವಾದರೂ ಕೈಗೆ ಸಿಗದೇ ಇರುವುದು ಅಲ್ಪಸಂಖ್ಯಾತ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.

ಇನ್ನು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗದ ಪರಿಣಾಮ ಕಾಲೇಜಿನ ಶುಲ್ಕ ಪಾವತಿ ಮಾಡದೇ ತೊಂದರೆಗೊಳಗಾಗಿದ್ದಾರೆ. ಅಲ್ಲದೆ ಕಾಲೇಜಿನಲ್ಲಿ ಶುಲ್ಕ ಪಾವತಿ ಮಾಡದ ಕಾರಣದಿಂದ ಪರೀಕ್ಷಾ ಪ್ರವೇಶಾತಿ ನಿರಾಕರಿಸಿದ್ದು, ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದಾರೆ. ರಾಜ್ಯ ಸರಕಾರ ಕೇಂದ್ರ ಅಲ್ಪಸಂಖ್ಯಾತ ಇಲಾಖೆಯನ್ನು ಪ್ರಶ್ನಿಸುವಲ್ಲಿ ವಿಫಲವಾಗಿದೆ. ಹಲವಾರು ಬಾರಿ ಮನವಿ ಮಾಡುವ ಮೂಲಕ ಪ್ರತಿಭಟನೆ ನಡೆಸಿ ಸರಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಆದುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾದ್ಯಂತ ವಿದ್ಯಾರ್ಥಿ ವೇತನ ಶೀಘ್ರ ವಿತರಣೆಗಾಗಿ ಆಗ್ರಹಿಸುತ್ತಿದ್ದು, ವಿಳಂಬವಾದಲ್ಲಿ ಅಲ್ಪಸಂಖ್ಯಾತ ಇಲಾಖೆಯ ವಿರುದ್ಧ ಬೃಹತ್ ಹೋರಾಟವನ್ನು ಸಂಘಟಿಸಲಾಗುವುದು ಎಂದು ಕ್ಯಾಂಪಸ್ ಫ್ರಂಟ್‌ನ ಪ್ರಕಟನೆ ತಿಳಿಸಿದೆ.

ಅಧಿಕಾರಿಗಳ ಅಸಡ್ಡೆ ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಇಲಾಖೆಗಳಿಗೆ ಭೇಟಿ ನೀಡಿದಾಗ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸರಿಯಾಗಿ ಸಹಕರಿಸುತ್ತಿಲ್ಲ. ತಾಂತ್ರಿಕ ದೋಷಗಳನ್ನು ಸರಿಪಡಿಸಲು ಅಧಿಕಾರಿಗಳು ವಿಳಂಬ ಮತ್ತು ಅಸಡ್ಡೆ ತೋರುತ್ತಿದ್ದಾರೆ. ವರ್ಷಗಳ ಅರ್ಜಿಗಳು ಕೆಎಂಡಿಸಿ ಕಚೇರಿಯಲ್ಲಿ ಮಂಜೂರಾಗಿಲ್ಲ.

-ಸಿಎಫ್‌ಐ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News