ದರೋಡೆಗೆ ಹೊಂಚು ಹಾಕಿದ್ದ ಐವರ ಬಂಧನ: ಮಾರಕಾಸ್ತ್ರಗಳ ಜಪ್ತಿ

Update: 2019-08-21 16:16 GMT

ಶಿವಮೊಗ್ಗ, ಆ. 21: ವಾಹನ ಅಡ್ಡಗಟ್ಟಿ ದರೋಡೆಗೈಯ್ಯಲು ಹೊಂಚು ಹಾಕಿದ್ದ ಉತ್ತರ ಕನ್ನಡ ಜಿಲ್ಲೆ ಭಟ್ಕಳ ಮೂಲದ ಐವರನ್ನು ಜಿಲ್ಲೆಯ ಸಾಗರ ಪಟ್ಟಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಮುಹಮ್ಮದ್ ಮುಸ್ತಫ (26), ಸುಹೈಲ್ (32), ಮುಹಮ್ಮದ್ ಅಕ್ರಂ (18), ಸಮೀರ್ (21) ಹಾಗೂ ಅಬ್ದುಲ್ ಮೋಹಿಂ (21) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಾರು, ಒಂದು ಮಚ್ಚು, ಎರಡು ಕಬ್ಬಿಣದ ರಾಡು, ಹಗ್ಗ, ಮೆಣಸಿನ ಪುಡಿ ಪ್ಯಾಕೆಟ್ ಹಾಗೂ ಕಾರಿನ ಢಿಕ್ಕಿಯಲ್ಲಿದ್ದ ಮರದ ದೊಣ್ಣೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಆರೋಪಿಗಳು ಸಾಗರ ಪಟ್ಟಣದ ಹೊರವಲಯ ಜೋಗ ರಸ್ತೆಯ ವರದಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು, ವಾಹನ ಅಡ್ಡಗಟ್ಟಿ ದರೋಡೆ ಮಾಡಲು ಹೊಂಚು ಹಾಕಿ ಕಾಯುತ್ತಿದ್ದರು. ಇದೇ ವೇಳೆ ಈ ಮಾರ್ಗದಲ್ಲಿ ಪೊಲೀಸರ ಗಸ್ತು ವಾಹನ ತೆರಳಿದೆ. ಪೊಲೀಸ್ ವಾಹನ ಗಮನಿಸಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಲೆತ್ನಿಸಿದ್ದಾರೆ. 

ಅನುಮಾನದ ಮೇರೆಗೆ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಹಿಡಿದಿದ್ದಾರೆ. ವಿಚಾರಣೆಗೊಳಪಡಿಸಿದಾಗ ದರೋಡೆಗೆ ಹೊಂಚು ಹಾಕುತ್ತಿದ್ದ ವಿಷಯ ಬಾಯ್ಬಿಟ್ಟಿದ್ದಾರೆ. ಈ ಸಂಬಂಧ ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News