ಪ್ರವಾಹ ಪೀಡಿತ ಗ್ರಾಮಗಳ ಸ್ಥಳಾಂತರಕ್ಕೆ ತೀರ್ಮಾನ: ಸಚಿವ ಸುರೇಶ್ ಕುಮಾರ್

Update: 2019-08-21 16:54 GMT

ಮಡಿಕೇರಿ, ಆ.21: ಕೊಡಗು ಜಿಲ್ಲೆಯಲ್ಲಿ ಪ್ರತೀವರ್ಷ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಸುರೇಶ್‍ ಕುಮಾರ್ ತಿಳಿಸಿದ್ದಾರೆ.

ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯ ಅತಿವೃಷ್ಟಿ ಸಂಭವಿಸಿದ ಸ್ಥಳಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ, ಸಂತ್ರಸ್ತರ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿವರ್ಷ ಹಾನಿಗೊಳಗಾಗುವ ಗ್ರಾಮಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು ಜಿಲ್ಲಾಡಳಿತ ತೀರ್ಮಾನಿಸಿದ್ದು, ಆದಷ್ಟು ಬೇಗ ಅದು ಜಾರಿಯಾಗುತ್ತದೆ ಎಂದು ತಿಳಿಸಿದರು.  

ಕೊಡಗಿನಲ್ಲಿ ಪ್ರತಿ ಬಾರಿಯೂ ಪ್ರವಾಹಕ್ಕೆ ಈಡಾಗುವ ಗ್ರಾಮಗಳನ್ನು ಗುರುತಿಸಿ ಸಂಪೂರ್ಣ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಅನೌಪಚಾರಿಕವಾಗಿ ಸಚಿವ ಸಂಪುಟ ಸಭೆ ನಿರ್ಧರಿಸಿತ್ತು. ಅದರಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಚಿವರು ಪ್ರವಾಸ ಮಾಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ಸಾಮಾಗ್ರಿಗಳು ತಲುಪಿದೆಯೇ ಎಂಬುದನ್ನು ಖಚಿತಪಡಿಸಿಕೊಂಡಿದ್ದೇವೆ. ಇದುವರೆಗೆ ಸರ್ಕಾರದ ತಕ್ಷಣದ ಪರಿಹಾರ 10 ಸಾವಿರ ರೂ. ಪರಿಹಾರ ಕೇಂದ್ರಗಳಲ್ಲಿದ್ದ  ಸಂತ್ರಸ್ತರ ಖಾತೆಗೆ ಜಮೆಯಾಗಿದೆ. ಇನ್ನು ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡಿರುವ ಸಂತ್ರಸ್ತರಿಗೆ ನಾಳೆಯೊಳಗಾಗಿ ಪರಿಹಾರ ಧನ ಸಿಗಲಿದೆ ಎಂದು ಸುರೇಶ್‍ಕುಮಾರ್ ಭರವಸೆ ನೀಡಿದರು.

ಇದಕ್ಕೂ ಮೊದಲು ಕುಶಾಲನಗರದ ಸಾಯಿ ಬಡಾವಣೆ, ಇಂದಿರಾ ಬಡಾವಣೆ, ನೆಲ್ಯಹುದಿಕೇರಿ, ಕುಂಬಾರಗುಂಡಿ, ಸಿದ್ದಾಪುರ, ಕರಡಿಗೋಡು ಗ್ರಾಮ ಸೇರಿದಂತೆ ನೆರೆಪೀಡಿತ ಗ್ರಾಮಗಳಿಗೆ ಭೇಟಿ  ನೀಡಿ ಪರಿಶೀಲನೆ ನಡೆಸಿ ನೆರೆ ಸಂತ್ರಸ್ತರ ಅಹವಾಲು ಆಲಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಉಪ ವಿಭಾಗಾಧಿಕಾರಿ ಜವರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಹಾಗೂ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News