ನೆರೆ ಸಂತ್ರಸ್ತರು ಧೃತಿಗೆಡಬೇಕಾದ ಆವಶ್ಯಕತೆ ಇಲ್ಲ: ಸಚಿವ ಸಿ.ಟಿ.ರವಿ

Update: 2019-08-21 17:10 GMT

ಚಿಕ್ಕಮಗಳೂರು, ಆ.21: ನೆರೆ ಹಾನಿಗೊಳಗಾದ ಸಂತ್ರಸ್ತರು ಧೃತಿಗೆಡಬೇಕಾದ ಆವಶ್ಯಕತೆ ಇಲ್ಲ. ಸಂತ್ರಸ್ಥರ ನೆರೆವಿಗಾಗಿ ರಾಜ್ಯ ಸರಕಾರ ಅಗತ್ಯ ನೆರವು ನೀಡಲು ಸಿದ್ಧವಿದೆ ಎಂದು ನೂತನ ಸಚಿವ ಸಿ.ಟಿ.ರವಿ ಹೇಳಿದರು. 

ಬುಧವಾರ ಜಿಲ್ಲೆಯ ವಿವಿಧ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಮಲೇಮನೆ ಗ್ರಾಮದಲ್ಲಿನ ನೆರೆ ಹಾವಳಿಯನ್ನು ವೀಕ್ಷಿಸಿ, ಸಂತ್ರಸ್ಥರಿಗೆ ಸಾಂತ್ವನ ಹೇಳಿದ ಅವರು, ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ 164 ಕೋಟಿ ರೂ. ಗೂ ಹೆಚ್ಚು ಹೆಚ್ಚು ಆಸ್ತಿ-ಪಾಸ್ತಿ ನಷ್ಟವಾಗಿದೆ. ಶೀಘ್ರವಾಗಿ ಪರಿಹಾರ ನೀಡಲು ಸರಕಾರ ಮುಂದಾಗಲಿದೆ ಎಂದು ಭರವಸೆ ನೀಡಿದರು. ಪ್ರತೀ ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರವಾಗಿ ಸರಕಾರ ತಲಾ 10 ಸಾವಿರ ರೂ. ಖಾತೆಗೆ ಜಮೆ ಮಾಡಿದ್ದು, ಸಂಪೂರ್ಣವಾಗಿ ನಾಶವಾದ ಮನೆಗಳ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳುವುದಕ್ಕೆ 50 ಸಾವಿರ, ಬಾಡಿಗೆ ಮನೆಯಲ್ಲಿ ಇರುವುದಕ್ಕೆ ಇಚ್ಛಿಸುವವರಿಗೆ 10 ತಿಂಗಳ ಅವಧಿಯವರಗೆ ಮಾಸಿಕ 5000 ರೂ. ಹಾಗೂ ಶಾಶ್ವತ  ಮನೆ ನಿರ್ಮಿಸಿವುದಕ್ಕೆ ಕೇಂದ್ರ ಸರಕಾರದಿಂದ 96 ಸಾವಿರ,  ರಾಜ್ಯ ಸರಕಾರದಿಂದ 4,04,000 ಸಾವಿರ ರೂ. ಸೇರಿದಂತೆ ಒಟ್ಟು 5 ಲಕ್ಷ ರೂ. ನೀಡುವ ನಿಟ್ಟಿನಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಮಲೇಮನೆ ವ್ಯಾಪ್ತಿಯಲ್ಲಿ 40 ಎಕರೆಯ ತೋಟದಲ್ಲಿ, 39 ಎಕರೆ ಕಾಫಿ, ಮೆಣಸು ಹಾಗೂ ಅಡಿಕೆ ಬೆಳೆ ನೆರೆಯಿಂದ ಹಾಳಾಗಿದೆ. ಎನ್.ಡಿ.ಆರ್.ಎಫ್. ಅನುಸಾರವಾಗಿ ಪರಿಹಾರ ನೀಡಲಾಗುವುದು. ಅಲ್ಲದೆ ಅನೇಕ ಸಂಘ, ಸಂಸ್ಥೆಗಳ ಜೊತೆಗೂಡಿ ಊರುಗಳ ಮರು ನಿರ್ಮಾಣ, ಪುನರ್ವಸತಿ ಕಲ್ಪಿಸಲು ಹಾಗೂ ಜಿಲ್ಲೆಗೆ ವಿಶೇಷವಾದ ಪ್ಯಾಕೇಜ್ ನೀಡಲು ಸಚಿವ ಸಂಪುಟ ಸಭೆಗೆ ಅಧ್ಯಯನದ ವರದಿ ಸಲ್ಲಿಸಿ ನಂತರ ಚರ್ಚಿಸಿ ತೀರ್ಮಾನಿಸಲಾಗುವುದು ಎಂದ ಅವರು, ಸರಕಾರಿ ನೌಕರರು ನಾಲ್ಕೈದು ದಿನಗಳು ಹಗಲು-ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸಿದ್ದಾರೆ. ಸಂತ್ರಸ್ತರಿಗೆ ಪಕ್ಷಾತೀತವಾಗಿ ಮಾನವೀಯತೆ ದೃಷ್ಟಿಯಿಂದ ನೆರವಾಗುತ್ತೇವೆ. ಸಾರ್ವಜನಿಕರು ಸಹ ಇವರ ನೆರವಿಗೆ ಕೈ ಜೋಡಿಸಬೇಕು ಎಂದು ಹೇಳಿದರು.

ನೂತನ ಸಚಿವ ಮಾಧುಸ್ವಾಮಿ ಮಾತನಾಡಿ, ಪ್ರಕೃತಿಯಿಂದ ಈ ದುರಂತ ಸಂಭವಿಸಿದೆ. ಪ್ರಕೃತಿಯ ವಿರುದ್ಧ ಹೋಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ತುರ್ತು ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರಕಾರ ನೆರವಾಗುತ್ತಿದೆ. ಶಾಶ್ವತ ಪರಿಹಾರಕ್ಕೆ ಕೇಂದ್ರದ ನೆರವು ಪಡೆದು ಅತೀ ಶೀಘ್ರವಾಗಿ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದ್ದು, ತಾತ್ಕಾಲಿಕ ಪರಿಹಾರವಾಗಿ ಸಂತ್ರಸ್ತರಿಗೆ  10 ಸಾವಿರ ರೂ. ಅನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ. ಅಲ್ಲದೇ ಜಿಲ್ಲೆಯ ಸಮಸ್ಯೆಗಳಿಗೆ ತುರ್ತು ಕಾರ್ಯಕ್ಕಾಗಿ ನೆರೆವಾಗಲು ಜಿಲ್ಲಾಡಳಿತದಲ್ಲಿ ಅಗತ್ಯ ಅನುದಾನವಿದೆ. ಬೆಳೆ ನಷ್ಟದ ಕುರಿತು ಇನ್ನೂ ಸರ್ವೇ ಪ್ರಗತಿಯಲ್ಲಿದ್ದು, ಎಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ ಎಂಬ ವರದಿಯನ್ನು ಶೀಘ್ರವಾಗಿ ಸರಕಾರಕ್ಕೆ ಸಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರತನ್, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ, ಪೊಲೀಸ್ ವರಿಷ್ಠಾಧಿಕಾರಿ ಹರೀಶ್‍ಪಾಂಡೆ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಅಶ್ವತಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News