ಚಿಕ್ಕಮಗಳೂರು: ಜಿಪಂ ಉಪಾಧ್ಯಕ್ಷರಾಗಿ ವಿಜಯಕುಮಾರ್ ಅವಿರೋಧ ಆಯ್ಕೆ

Update: 2019-08-21 17:34 GMT

ಚಿಕ್ಕಮಗಳೂರು, ಆ.21: ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ದೇವನೂರು ಕ್ಷೇತ್ರದ ಜಿ.ಎಸ್.ವಿಜಯಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಉಪಾಧ್ಯಕ್ಷರಾಗಿದ್ದ ಅಮೃತಪುರ ಕ್ಷೇತ್ರದ ಕೆ.ಆರ್.ಆನಂದಪ್ಪ ತಮ್ಮ ಸ್ಥಾನಕ್ಕೆ ಇತ್ತೀಚೆಗೆ ರಾಜಿನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ವಿಜಯ್‍ಕುಮಾರ್ ಒಬ್ಬರೇ ತಮ್ಮ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಕ್ಕೆ ರಾಮಸ್ವಾಮಿ ಸೂಚಕರಾಗಿಯೂ, ಬೆಳವಾಡಿ ರವೀಂದ್ರ ಅನುಮೋದಕರಾಗಿದ್ದರು. ಇವರೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಮೈಸೂರು ಕಂದಾಯ ವಿಭಾಗೀಯ ಪ್ರಾದೇಶಿಕ ಆಯುಕ್ತ ವಿ.ಯಶವಂತ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. 

ಅವಿರೋಧ ಆಯ್ಕೆ ಪ್ರಕಟಗೊಳ್ಳುತ್ತಿದಂತೆ ಬಿಜೆಪಿ ಮುಖಂಡರು, ಕ್ಷೇತ್ರದ ಜನರು, ಆಪ್ತರು, ಸ್ನೇಹಿತರು, ಸಂಬಂಧಿಕರು ನೂತನ ಉಪಾಧ್ಯಕ್ಷ ವಿಜಯ್‍ಕುಮಾರ್ ಅವರಿಗೆ ಹಾರ ಹಾಕಿ ಅಭಿನಂದಿಸಿದರು. ಎಚ್.ಡಿ.ತಮ್ಮಯ್ಯ, ಬಿ.ರಾಜಪ್ಪ, ಸಿ.ಎಚ್.ಲೋಕೇಶ, ವರಸಿದ್ಧಿ ವೇಣುಗೋಪಾಲ್, ಪುಷ್ಪರಾಜ್, ಚಿಕ್ಕದೇವನೂರು ರವಿ, ಚೇತನ್, ಚಟ್ನಳ್ಳಿ ಮಹೇಶ್, ಸೀತಾರಾಮ ಭರಣ್ಯ, ಪುಟ್ಟೇಗೌಡ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

ಗುಂಡುಸಾಗರ ಗ್ರಾಮದಲ್ಲಿ 1979ರ ಸೆ.15ರಂದು ನಂಜುಂಡಪ್ಪ ಮತ್ತು ಶಂಕರಮ್ಮ ದಂಪತಿ ಪುತ್ರನಾಗಿ ಜನಿಸಿದ ವಿಜಯಕುಮಾರ್ ಪಿಯುಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಮೊದಲು ಶಾಲಾಭಿವೃದ್ದಿ ಸಮಿತಿ ಅಸ್ತಿತ್ವಕ್ಕೆ ಬಂದಾಗ ಅದರ ಅಧ್ಯಕ್ಷರಾಗಿದ್ದರು. ಎರಡು ಬಾರಿ ನಾಗರಾಳು ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಅವರು ಮೊದಲ ಅವಧಿಯಲ್ಲೇ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಇವರು ದೇವನೂರು ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಕಣಕ್ಕಿಳಿದು ಜಯಗಳಿಸಿದರು. ಪಕ್ಷದ ತೀರ್ಮಾನದಂತೆ ಅಧಿಕಾರಾವಧಿ ಹಂಚಿಕೆಯಾಗಿ ಈಗ ಉಪಾಧ್ಯಕ್ಷರಾಗಿ ವಿಜಯ್‍ಕುಮಾರ್ ಆಯ್ಕೆಯಾಗಿದ್ದಾರೆ.  

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪ್ರಭಾಕರ್, ಬೆಳವಾಡಿ ರವೀಂದ್ರ, ಆನಂದಪ್ಪ, ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿದರು.

ಪ್ರಸಕ್ತ ರಾಜ್ಯ ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಉಂಟಾಗಿದೆ. ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರ ಹಿಡಿದಿದೆ. ಈ ಕ್ಷೇತ್ರದ ಶಾಸಕರೇ ಸಚಿವರಾಗಿದ್ದಾರೆ. ಜಿಲ್ಲೆಯ ಬಯಲುಭಾಗದಲ್ಲಿ ಅನಾವೃಷ್ಟಿ, ಮಲೆನಾಡಿನಲ್ಲಿ ಅತಿವೃಷ್ಟಿ ಉಂಟಾಗಿದೆ. ರಾಜ್ಯ ಸರಕಾರ ಹಾಗೂ ಸಚಿವರ ಸಹಕಾರದಿಂದ ಈ ಸಮಸ್ಯೆ ಬಗೆಹರಿಸಲು ಹೆಚ್ಚಿನ ಗಮನ ಹರಿಸಲಾಗುವುದು.
- ವಿಜಯಕುಮಾರ್, ಜಿಪಂ ನೂತನ ಉಪಾಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News