ಅತೃಪ್ತ ಪ್ರೇತಾತ್ಮ ತೃಪ್ತಿ ಪಡಿಸಲು ಹಳೆ ಮೈಸೂರು ಭಾಗಕ್ಕೆ ಸಚಿವ ಸ್ಥಾನ ನೀಡಿಲ್ಲ: ಸಾ.ರಾ.ಮಹೇಶ್ ವಾಗ್ದಾಳಿ

Update: 2019-08-21 17:47 GMT

ಮೈಸೂರು,ಆ.21: ಅತೃಪ್ತ ಪ್ರೇತಾತ್ಮ ತೃಪ್ತಿ ಪಡಿಸುವುದಕ್ಕೋಸ್ಕರ ಹಳೆ ಮೈಸೂರು ಭಾಗಕ್ಕೆ ಸಚಿವ ಸ್ಥಾನ ನೀಡದೆ ನಿರ್ಲಕ್ಷಿಸಲಾಗಿದೆ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಹೆಸರೇಳದೆ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೇ ನಾಡ ಹಬ್ಬ ದಸರಾ ಗಜಪಯಣ ಉದ್ಘಾಟಿಸುವ ದೌರ್ಭಾಗ್ಯ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

26 ದಿನಗಳ ನಂತರ ಅಪವಿತ್ರ ಸರಕಾರದ ಅರ್ಧಂಬರ್ಧ ಮಂತ್ರಿ ಮಂಡಲ ರಚನಯಾಗಿದ್ದು, ಹಳೆ ಮೈಸೂರು ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಸಮ್ಮಿಶ್ರ ಸರಕಾರ ಬೀಳಿಸಲು ಸಹಕಾರ ನೀಡಿದ ಅತೃಪ್ತ ಪ್ರೇತಾತ್ಮಕ್ಕೆ ಸ್ಥಾನ ನೀಡಬೇಕೆಂಬ ಉದ್ದೇಶದಿಂದ ಉಳಿಸಿಕೊಂಡಿದ್ದು, ಇಲ್ಲಿ ನಾಲ್ಕೈದು ಬಾರಿ ಶಾಸಕರಾಗಿ ಆಯ್ಕೆಯಾಗಿರುವವರನ್ನು ನಿರ್ಲಕ್ಷಿಸಲಾಗಿದ್ದು, ಎಲ್ಲಿ ಹೋಯಿತು ತಮ್ಮ ಪಕ್ಷದ ಸಿದ್ಧಾಂತ ಎಂದು ಬಿಜೆಪಿಯನ್ನು ಪ್ರಶ್ನಿಸಿದರು.

ಟೆಲಿಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವ ಸರಕಾರ ಅದರಂತೆ ಈ ಅಪವಿತ್ರ ಸರಕಾರ ಅಸ್ತಿತ್ವಕ್ಕೆ ಬರಲು ಯಾರು ಯಾರಿಗೆ ಎಷ್ಟೆಷ್ಟು ನೀಡಿದ್ದೀರಿ? ಏನೇನು ಮಾತುಕತೆ ನಡೆಸಿದ್ದೀರಿ ಎಂಬುವುದರ ಬಗ್ಗೆಯೂ ತನಿಖೆಯಾಗಲಿ. ಇದನ್ನು ಸಹ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಗುರುವಾರ ಗಜಪಯಣ ಆರಂಭವಾಗುತ್ತಿದ್ದು, ಬೆಂಗಳೂರಿನಿಂದ ಬಂದು ಸಚಿವರು ಉದ್ಘಾಟಿಸುವ ದುಸ್ಥಿತಿಗೆ ದಸರಾ ಸಾಕ್ಷಿಯಾಗಲಿದೆ ಎಂದು ಕಿಡಿಕಾರಿದರು.

ನೆರೆಯಿಂದ ಈ ಭಾಗದಲ್ಲಿ ಹಾನಿಗೊಳಗಾಗಿದ್ದು, ಜನರ ಅಹವಾಲು ಸ್ವೀಕರಿಸಲು ಇಲ್ಲೊಬ್ಬ ಸಚಿವರಿಲ್ಲ, ಹಿರಿಯರಾದ ಅಪ್ಪಚ್ಚು ರಂಜನ್ ಅಥವಾ ಬೋಪಯ್ಯನವರಿಗೆ ಸಚಿವ ಸ್ಥಾನ ನೀಡಬಹುದಿತ್ತು, ಆದರೆ ಈ ಸ್ಥಾನವನ್ನು ಅತೃಪ್ತ ಆತ್ಮಕ್ಕೆ ಮೀಸಲಿಟ್ಟಿರುವುದು ದುರಂತವೇ ಸರಿ ಎಂದು ಪರೋಕ್ಷವಾಗಿ ವಿಶ್ವನಾಥ್ ವಿರುದ್ಧ ಹರಿಹಾಯ್ದರು.

ಜನರು ನೋವಿನಿಂದ ಬಳಲುತ್ತಿದ್ದು ವೈಯಕ್ತಿವಾಗಿ ಮಧ್ಯಂತರ ಚುನಾವಣೆ ನಡೆಸಲು ಸಮ್ಮತವಲ್ಲ ಎಂಬ ಅನಿಸಿಕೆ ವ್ಯಕ್ತಪಡಿಸಿದರು. ಆದರೆ ಪ್ರಸ್ತುತ ಸ್ಥಿತಿಯಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ಅನಿವಾರ್ಯವೆನಿಸುತ್ತಿದೆ ಎಂದರು.

ಅಂದಿನ ಬಿಜೆಪಿ ಪಕ್ಷದ ಸಿದ್ಧಾಂತಕ್ಕೂ ಇಂದಿಗೂ ತುಂಬಾ ವ್ಯತ್ಯಾಸವಿದೆ. ಪಕ್ಷದಲ್ಲಿರುವ ನಾಯಕರಿಂದ ತನ್ನ ನೀತಿ ತತ್ವ ಗಾಳಿಗೆ ತೂರಿದೆ ಎಂದು ಹೇಳಿದರು. ಸಮ್ಮಿಶ್ರ ಸರಕಾರದಲ್ಲಿ ಅವಧಿ ಮುಗಿದ ಮೇಲೆ ವರ್ಗಾವಣೆ ಮಾಡಿತ್ತು. ಬಿಜೆಪಿ ಸರಕಾರ ಬಂದು ಕೇವಲ 25 ದಿನಗಳಲ್ಲಿ 650 ಜನರನ್ನು ವರ್ಗಾವಣೆಗೊಳಿಸಿದ್ದು ಯಾಕೆ ಎಂದು ರಾಜ್ಯದ ಜನಕ್ಕೆ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.

ಶಾಸಕ ಜಿ.ಟಿ.ದೇವೇಗೌಡರಿಗೆ ಆರೋಗ್ಯ ಸರಿಯಿಲ್ಲ, ಆದ್ದರಿಂದ ಅವರು ಈ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿನ್ನೂ 20 ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲಿರಬೇಕು ಎಂದು ಆಶಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಆರ್.ಲಿಂಗಪ್ಪ, ಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು, ಸೋಮಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News