ಒಳ್ಳೆಯದೋ, ಕೆಟ್ಟದೋ ಚೀನಾವನ್ನು ಎದುರಿಸಲೇ, ಬೇಕಿತ್ತು: ಟ್ರಂಪ್

Update: 2019-08-21 18:27 GMT

ವಾಶಿಂಗ್ಟನ್, ಆ. 21: ಚೀನಾವು ದಶಕಗಳಿಂದ ಅಮೆರಿಕವನ್ನು ವಂಚಿಸಿ ಹಣ ಮಾಡುತ್ತಿದ್ದು, ಅದರ ವಿರುದ್ಧ ವ್ಯಾಪಾರ ಸಮರವನ್ನು ಸಾರುವುದು ಅಗತ್ಯವಾಗಿದೆ ಹಾಗೂ ಇದರ ಫಲವಾಗಿ ಅಮೆರಿಕ ಕಿರು ಅವಧಿಯ ಆರ್ಥಿಕ ಹಿಂಜರಿತವನ್ನು ಎದುರಿಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘‘ಒಳ್ಳೆಯದೋ, ಕೆಟ್ಟದೋ, ಕಿರು ಅವಧಿಯ ಆರ್ಥಿಕ ಹಿಂಜರಿತ ನಗಣ್ಯ. ಚೀನಾದೊಂದಿಗಿನ ನಮ್ಮ ಸಮಸ್ಯೆಯನ್ನು ನಾವು ಪರಿಹರಿಸಿಕೊಳ್ಳಬೇಕಾಗಿದೆ. ಯಾಕೆಂದರೆ, ಅವರು ವರ್ಷಕ್ಕೆ 500 ಬಿಲಿಯ ಡಾಲರ್‌ಗಿಂತಲೂ ಹೆಚ್ಚಿನ ಮೊತ್ತವನ್ನು ಅಮೆರಿಕದಿಂದ ಪಡೆದುಕೊಳ್ಳುತ್ತಿದ್ದಾರೆ. ಹಾಗೂ ಬೌದ್ಧಿಕ ಆಸ್ತಿ ಕಳ್ಳತನ ಮತ್ತು ಇತರ ವಿಷಯಗಳು ಅವರಿಗೆ ಅನ್ವಯಿಸುವುದಿಲ್ಲ’’ ಎಂದು ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ನುಡಿದರು.

‘‘ಅದೂ ಅಲ್ಲದೆ, ಇದರಲ್ಲಿ ರಾಷ್ಟ್ರೀಯ ಭದ್ರತೆಯೂ ಒಳಗೊಂಡಿದೆ. ಹಾಗಾಗಿ, ಓಹ್, ನಾವು ಎರಡು ತಿಂಗಳ ಕಾಲ ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತೇವೆಯೋ ಎಂಬ ನಿಮ್ಮ ಪ್ರಶ್ನೆಯ ಹೊರತಾಗಿಯೂ, ನಾನು ಇದನ್ನು ಮಾಡುತ್ತಿದ್ದೇನೆ, ಒಳ್ಳೆಯದೋ ಕೆಟ್ಟದೋ! ಯಾರಾದರೊಬ್ಬರು ಚೀನಾವನ್ನು ಎದುರಿಸಲೇಬೇಕಿತ್ತು’’ ಎಂದರು.

ಚೀನಾದೊಂದಿಗಿನ ವ್ಯಾಪಾರ ಸಮರದಿಂದಾಗಿ ಅಮೆರಿಕವು ಆರ್ಥಿಕ ಹಿಂಜರಿತದತ್ತ ಮುಖ ಮಾಡುತ್ತಿದೆ ಎಂಬ ವರದಿಗಳ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News