ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಪ್ರಕರಣದಲ್ಲಿ ಶರಣಾಗಲು ಒಪ್ಪಿದ ಕಮಲನಾಥ್ ಸೋದರಳಿಯ

Update: 2019-08-22 14:05 GMT

ಹೊಸದಿಲ್ಲಿ,ಆ.22: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರ ಸೋದರಳಿಯ ರತುಲ್ ಪುರಿ ಅವರು ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಪ್ರಕರಣದಲ್ಲಿ ಶರಣಾಗುವುದಾಗಿ ಕೋರಿ ಗುರುವಾರ ವಿಶೇಷ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಪುರಿ ಈಗಾಗಲೇ ಪ್ರತ್ಯೇಕ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.)ದ ವಶದಲ್ಲಿದ್ದಾರೆ. ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ವ್ಯವಹಾರದಲ್ಲಿ ಲಂಚ ಪಡೆದ ಆರೋಪಿಯಾಗಿರುವ ಪುರಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಶುಕ್ರವಾರ ಕೈಗೆತ್ತಿಕೊಳ್ಳಲಿದೆ.

ತನ್ನ ವಿರುದ್ಧ ಹೊರಡಿಸಲಾಗಿರುವ ಜಾಮೀನುರಹಿತ ವಾರಂಟ್‌ನ್ನು ರದ್ದುಗೊಳಿಸುವಂತೆ ಕೋರಿ ಪುರಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರು ಬುಧವಾರ ವಜಾಗೊಳಿಸಿದ್ದರು. ವಾರಂಟ್ ರದ್ದತಿಗೆ ಯಾವುದೇ ಕಾರಣಗಳಿಲ್ಲವೆಂದು ಅವರು ತನ್ನ ಆದೇಶದಲ್ಲಿ ತಿಳಿಸಿದ್ದರು. ತಾನು ತನಿಖೆಗೆ ಸಹಕರಿಸಲು ಸಿದ್ಧನಿರುವುದರಿಂದ ಜಾಮೀನುರಹಿತ ವಾರಂಟ್‌ನ ಅಗತ್ಯವಿಲ್ಲ ಎಂದು ಪುರಿ ತನ್ನ ಅರ್ಜಿಯಲ್ಲಿ ನಿವೇದಿಸಿಕೊಂಡಿದ್ದರು. ಈ.ಡಿ. ಪದೇ ಪದೇ ನೋಟಿಸ್‌ಗಳನ್ನು ಹೊರಡಿಸಿದ್ದರೂ ಆಯಾ ದಿನಾಂಕಗಳಂದು ಪುರಿ ತನಿಖೆಗೆ ಹಾಜರಾಗಿರಲಿಲ್ಲ ಎನ್ನುವುದನ್ನು ನ್ಯಾಯಾಲಯವು ಬೆಟ್ಟು ಮಾಡಿತ್ತು.

 ತನ್ನ ಕಂಪನಿ ಮೋಸರ್ ಬೇರ್‌ಗೆ ಸಂಬಂಧಿಸಿದ 354 ಕೋಟಿ ರೂ.ಬ್ಯಾಂಕ್ ಸಾಲ ವಂಚನೆಗೆ ತಳುಕು ಹಾಕಿಕೊಂಡಿರುವ ಹೊಸ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಪುರಿ ಅವರನ್ನು ಈ.ಡಿ.ಮಂಗಳವಾರ ಬಂಧಿಸಿತ್ತು. ಅದೇ ದಿನ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಉಚ್ಚ ನ್ಯಾಯಾಲಯವು,ಅವರ ಕಸ್ಟಡಿ ವಿಚಾರಣೆಯು ಅಗತ್ಯವಾಗಿದೆ ಎಂದು ಹೇಳಿತ್ತು. ನಂತರ ವಿಶೇಷ ನ್ಯಾಯಾಲಯವು ಪುರಿಗೆ ಆರು ದಿನಗಳ ಈ.ಡಿ.ಕಸ್ಟಡಿಯನ್ನು ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News