ಅಫ್ಘಾನ್‌ನಲ್ಲಿ ಐಸಿಸ್ ವಿರುದ್ಧ ಭಾರತ ಹೋರಾಡಬೇಕು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಗಿತ

Update: 2019-08-22 15:10 GMT

ವಾಶಿಂಗ್ಟನ್, ಆ. 22: ಅಫ್ಘಾನಿಸ್ತಾನದಲ್ಲಿ ಐಸಿಸ್ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ಭಾರತ, ರಶ್ಯ, ಟರ್ಕಿ, ಅಫ್ಘಾನಿಸ್ತಾನ, ಇರಾನ್, ಇರಾಕ್ ಮತ್ತು ಪಾಕಿಸ್ತಾನ ಮುಂತಾದ ದೇಶಗಳು ತೀವ್ರಗೊಳಿಸುವ ಅಗತ್ಯವಿದೆ ಎಂಬ ಇಂಗಿತವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ವ್ಯಕ್ತಪಡಿಸಿದ್ದಾರೆ.

‘‘ಅಲ್ಲಿ ಭಾರತವಿದೆ. ಆದರೆ, ಅವರು ಐಸಿಸ್ ವಿರುದ್ಧ ಹೋರಾಡುತ್ತಿಲ್ಲ. ನಾವು ಹೋರಾಡುತ್ತಿದ್ದೇವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

ಅಮೆರಿಕವು ಅಫ್ಘಾನಿಸ್ತಾನದಲ್ಲಿ ತನ್ನ ಸೇನೆಯನ್ನು ಮುಂದುವರಿಸುವುದೇ ಅಥವಾ ತಾಲಿಬಾನ್ ಜೊತೆಗಿನ ಶಾಂತಿ ಪ್ರಕ್ರಿಯೆಯ ಭಾಗವಾಗಿ ಅಲ್ಲಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದೇ ಎಂಬ ಪ್ರಶ್ನೆಯೊಂದಕ್ಕೆ ಅವರು ಈ ರೀತಿಯಾಗಿ ಉತ್ತರಿಸಿದರು.

‘‘ಪಾಕಿಸ್ತಾನವೂ ಅದರ ಪಕ್ಕದಲ್ಲೇ ಇದೆ. ಆದರೆ, ಈ ಹೋರಾಟದಲ್ಲಿ ಅವರ ಪಾಲುದಾರಿಕೆ ತೀರಾ ಕಡಿಮೆಯಿದೆ. ಇದು ಸರಿಯಲ್ಲ’’ ಎಂದು ಟ್ರಂಪ್ ಹೇಳಿದರು.

 ಈ ಹೊಸ ನಿರೀಕ್ಷೆಗಳ ಬಗ್ಗೆ ಅಮೆರಿಕ ಅಧ್ಯಕ್ಷರು ಭಾರತದೊಂದಿಗೆ ಮಾತನಾಡಿದ್ದಾರೆಯೇ ಎನ್ನುವುದು ಗೊತ್ತಾಗಿಲ್ಲ. ಯಾಕೆಂದರೆ ಇದು ಅಮೆರಿಕದ ನೀತಿಯಲ್ಲಿನ ಗಮನಾರ್ಹ ಬದಲಾವಣೆಯಾಗಿದೆ. ಅದೂ ಅಲ್ಲದೆ, ಟ್ರಂಪ್‌ರ 2017ರ ದಕ್ಷಿಣ ಏಶ್ಯ ನೀತಿಯೂ, ಅಫ್ಘಾನಿಸ್ತಾನದಲ್ಲಿ ಭಾರತದ ಪಾತ್ರ ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಸೀಮಿತವಾಗಿದೆ ಎಂದು ಹೇಳಿತ್ತು.

ಸಮರ ಕಾರ್ಯಾಚರಣೆ ಮತ್ತು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾರತ ಭಾಗವಹಿಸುವುದನ್ನು ನಿರೀಕ್ಷಿಸುವುದೂ ಇಲ್ಲ ಹಾಗೂ ಭಾಗವಹಿಸುವ ಉತ್ಸಾಹವೂ ಅದಕ್ಕಿಲ್ಲ ಎಂದು ಅದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News