ನೆರೆ ಸಂತ್ರಸ್ತರಿಗೆ 200 ಯುನಿಟ್ ರಕ್ತ ದಾನ

Update: 2019-08-22 16:33 GMT

ಬೆಂಗಳೂರು, ಆ.22: ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಜಿಲ್ಲಾ 317ಎ ಬೆಂಗಳೂರಿನ ವಿಜಯನಗರ ಲಯನ್ಸ್ ರಕ್ತ ನಿಧಿಯಿಂದ 200 ಯೂನಿಟ್ ರಕ್ತವನ್ನು ರಾಯಚೂರಿನ ಮೆಡಿಕಲ್ ಸೈನ್ಸ್ ಸರಕಾರಿ ಆಸ್ಪತ್ರೆಗೆ ಉಚಿತವಾಗಿ ಕಳುಹಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗವರ್ನರ್ ಡಾ. ವಿ.ನಾಗರಾಜ್ ಭೈರಿ, ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳು ತೊಂದರೆಗೆ ಈಡಾಗಿದ್ದು ಲಕ್ಷಾಂತರ ಜನರು ಕಷ್ಟಕ್ಕೀಡಾಗಿದ್ದಾರೆ. ಅವರಿಗೆ ಸ್ಪಂದಿಸುವುದು ನಮ್ಮ ಲಯನ್ಸ್ ಸೇವಾ ಸಂಸ್ಥೆಯ ಆದ್ಯ ಕರ್ತವ್ಯ. ಈಗಾಗಲೇ ನೆರೆ ಪೀಡಿತ ಪ್ರದೇಶಗಳಿಗೆ ಬೇಕಾಗುವ ಅವಶ್ಯಕ ಸಾಮಗ್ರಿಗಳನ್ನು ಟ್ರಕ್‌ಗಳ ಮೂಲಕ ಕಳುಹಿಸಿಕೊಡಲಾಗಿದೆ. ಅದರ ಜತೆಗೆ ನೆರೆಪೀಡಿತ ಜಿಲ್ಲೆಯಾದ ರಾಯಚೂರಿನ ಸರಕಾರಿ ಆಸ್ಪತ್ರೆಗೆ ಅವಶ್ಯಕತೆ ಇರುವ ಗರ್ಭಿಣಿಯರಿಗೆ, ನೆರೆ ಸಂತ್ರಸ್ತ ಗಾಯಾಳುಗಳಿಗೆ ಹಾಗೂ ಇತರೆ ರೋಗಿಗಳಿಗೆ ಸುಮಾರು 200 ಯೂನಿಟ್ ರಕ್ತ ಅಗತ್ಯವಿದೆ ಎಂಬ ಕೋರಿಕೆಯ ಮೇರೆಗೆ ರಕ್ತವನ್ನು ಕಳುಹಿಸಿಕೊಟ್ಟೆವು ಎಂದು ತಿಳಿಸಿದರು.

ಲಯನ್ಸ್ ರಕ್ತ ನಿಧಿಯ ಟ್ರಸ್ಟಿ ಮನೋಜ್ ಕುಮಾರ್ ಮಾತನಾಡಿ, ಇತರೆ ಜಿಲ್ಲೆಗಳಲ್ಲಿ ಅವಶ್ಯಕತೆ ಬಂದಲ್ಲಿ ನಮ್ಮ ಲಯನ್ಸ್ ಕ್ಲಬ್‌ಗಳು, ಇತರೆ ಸಂಸ್ಥೆಗಳು ಹಾಗೂ ಕಾಲೇಜುಗಳಲ್ಲಿ ರಕ್ತದಾನ ಶಿಬಿರಗಳು ಏರ್ಪಡಿಸಿ ರಕ್ತದ ಯುನಿಟ್‌ಗಳನ್ನು ತಕ್ಕಂತೆ ಪೂರೈಸಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ಲಯನ್ ಸಂಜಯ್ ಕುಮಾರ್, ಡಾ. ಕರುಣ ವೀರ ಕೆಂಪಯ್ಯ, ಜಿಲ್ಲಾಧ್ಯಕ್ಷರಾದ ಲಯನ್ ಡಾ. ಶಿವನಂಜಯ್ಯ, ಲಯನ್ ವೆಂಕಟೇಶ್, ಸತ್ಯವತಿ, ಗಾಯತ್ರಿ ಗಿರೀಶ್, ರಾಜೇಶ್ವರಿ ವಸಂತಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News