ಸಂಯುಕ್ತ ಬೇಸಾಯ ಯೋಜನೆಗೆ ರಾಜ್ಯ ಸರಕಾರ ಹಸಿರು ನಿಶಾನೆ

Update: 2019-08-22 16:39 GMT

ಬೆಂಗಳೂರು, ಆ.22: ಹಿಂದಿನ ಮೈತ್ರಿ ಸರಕಾರದ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದ ಸಂಯುಕ್ತ ಬೇಸಾಯ ಯೋಜನೆ ಜಾರಿಗೆ ತರಲು ಮುಂದಾಗಿರುವ ಬಿಜೆಪಿ ಸರಕಾರ, ಅದಕ್ಕಾಗಿ ಐದು ಕೋಟಿ ಅನುದಾನ ನೀಡುವ ಮೂಲಕ ಹಸಿರು ನಿಶಾನೆ ತೋರಿದೆ.

ರೈತರಿಗೆ ಅನುಕೂಲವಾಗುವಂತಹ ಯೋಜನೆ ಇದಾಗಿದ್ದು, ಸಹಕಾರ ವಲಯದಲ್ಲಿ ಕೃಷಿ ಇಲಾಖೆಯ ರೈತ ಉತ್ಪಾದಕರ ಸಂಸ್ಥೆಯ ಮಾದರಿಯಲ್ಲಿ 300 ಎಕರೆ ಕೃಷಿ ಭೂಮಿಯಲ್ಲಿ 100 ರೈತರನ್ನೊಳಗೊಂಡ 500 ಸಂಯುಕ್ತ ಬೇಸಾಯ ಸಹಕಾರ ಸಂಘಗಳನ್ನು ಸ್ಥಾಪನೆ ಮಾಡಲು ಆದೇಶಿಸಿದೆ.

ಪ್ರತಿ ಜಿಲ್ಲೆಯಲ್ಲಿ ಗರಿಷ್ಠ 20 ಸಂಘಗಳನ್ನು ರಚಿಸಲು ತಾಕೀತು ಮಾಡಲಾಗಿದ್ದು, ಸಹಕಾರ ಸಂಘಗಳ ಸ್ಥಾಪನೆ ಮತ್ತು ಒಂದು ವರ್ಷದ ಅವಧಿ ನಿರ್ವಹಣೆಗೆ ನೋಂದಣಿ, ತರಬೇತಿ, ಶಿಕ್ಷಣ, ಗೌರವಧನ, ಕಚೇರಿ ನಿರ್ವಹಣೆ ಸೇರಿ ಒಂದು ಲಕ್ಷ ರೂ. ಅನುದಾನವನ್ನು ಸರಕಾರ ನೀಡಲಿದೆ. ಡಿಸಿಸಿ ಬ್ಯಾಂಕ್‌ಗಳು ಈ ಸಂಘಗಳಿಗೆ ಅವಶ್ಯಕತೆಯಿರುವ ಸಾಲ ನೀಡಲು ಮುಂದಾಗಬೇಕು ಎಂದು ಆದೇಶದಲ್ಲಿದೆ.

ಜಿಲ್ಲಾ ಮಟ್ಟದ ಸಮಿತಿ ರಚನೆ: ಸಹಕಾರ ಸಂಘಗಳ ನಿರ್ವಹಣೆ ಮತ್ತು ಉಸ್ತುವಾರಿ ನೋಡಿಕೊಳ್ಳಲು ಜಿಲ್ಲೆ ಸಹಕಾರ ಸಂಘಗಳ ಉಪ ನಿಬಂಧಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ. ಅದರಲ್ಲಿ ತೋಟಗಾರಿಕೆ, ಕೃಷಿ, ಮೀನುಗಾರಿಕೆ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಗಳ ಜಿಲ್ಲಾ ಉಪ ನಿರ್ದೇಶಕರು ಸದಸ್ಯರಾಗಿ, ಜಿಲ್ಲಾ ಕೇಂದ್ರದಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಏನೇನು ಮಾಡಬೇಕಿದೆ: 100 ಅಥವಾ ಅದಕ್ಕಿಂತ ಹೆಚ್ಚಿನ ರೈತ ಕುಟುಂಬಗಳನ್ನು ಹೊಂದಿದ ಗ್ರಾಮದಲ್ಲಿ ಪ್ರತಿ ಒಂದು ಕುಟುಂಬದಿಂದ ಒಬ್ಬರನ್ನು ಒಳಗೊಂಡಂತೆ 100 ರೈತರನ್ನು ಆಯ್ಕೆ ಮಾಡಬೇಕು. ಅವರ ಮೂಲಕ ಸಂಯುಕ್ತ ಬೇಸಾಯ ಸಹಕಾರ ಸಂಘಗಳನ್ನು ಸ್ಥಾಪನೆ ಮಾಡಬೇಕು. ಅದರಲ್ಲಿ ಕನಿಷ್ಠ ಶೇ.70 ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸದಸ್ಯತ್ವ ನೀಡಬೇಕು ಎಂದು ಹೇಳಲಾಗಿದೆ.

ಶೂನ್ಯ ಬಂಡವಾಳಕ್ಕೆ ಆದ್ಯತೆ:

ಶೂನ್ಯ ಬಂಡವಾಳ ಬೇಸಾಯ ಕೃಷಿ ಚಟುವಟಿಕೆಗಳಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ತುರ್ತು ಅವಶ್ಯಕತೆಗಳಿಗಾಗಿ ಕೃಷಿ ಉತ್ಪನ್ನದ ಮೇಲೆ ಸರಕಾರದಲ್ಲಿ ಪ್ರಚಲಿತ ಯೋಜನೆಯಲ್ಲಿ ಸಾಲ ಪಡೆಯಬಹುದು. ನೀರಾವರಿ, ಹನಿ ನೀರಾವರಿ, ಯಂತ್ರೋಪಕರಣಗಳು, ಸಂಸ್ಕರಣೆ ಹಾಗೂ ಶೇಖರಣೆ, ಸಾಗಾಣಿಕೆಗೆ ಅವಶ್ಯವಾದ ಸವಲತ್ತು ಕಲ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಕೃಷಿಗೆ ಸೀಮಿತ

ಸಹಕಾರ ಸಂಘಗಳನ್ನು ಸ್ಥಾಪನೆ ಮಾಡುವ ಸಂದರ್ಭದಲ್ಲಿ ಬೈಲಾ ರೂಪಿಸಬೇಕು. ಕೃಷಿ ವಿಸ್ತರಣೆ, ವೈಜ್ಞಾನಿಕ ಮಾದರಿಯಲ್ಲಿ ಕೃಷಿ, ಬೀಜ, ಗೊಬ್ಬರ, ಔಷಧಿ ಮುಂತಾದ ಕೃಷಿ ಪರಿಕರಗಳನ್ನು ಸಾಮೂಹಿಕವಾಗಿ ಖರೀದಿಸಲು ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡು ಸೂಕ್ತ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಮಾರುಕಟ್ಟೆ ವ್ಯವಸ್ಥೆಗೂ ಸಂಘಗಳು ಮುಂದಾಗಬೇಕು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News