ಪೊಲೀಸರ ಪರಿಷ್ಕೃತ ವೇತನ ಮತ್ತಷ್ಟು ವಿಳಂಬ ಸಾಧ್ಯತೆ

Update: 2019-08-22 17:08 GMT

ಬೆಂಗಳೂರು, ಆ.22: ರಾಘವೇಂದ್ರ ಔರಾದ್ಕರ್ ಸಮಿತಿಯ ಶಿಫಾರಸ್ಸಿನಂತೆ ಪರಿಷ್ಕೃತ ವೇತನ ಕೈ ಸೇರುವ ಆಸೆಯಲ್ಲಿದ್ದ ರಾಜ್ಯದ ಪೊಲೀಸರಿಗೆ ನಿರಾಸೆಯಾಗುವ ಸಾಧ್ಯತೆಯಿದೆ. ಆ.1 ರಿಂದ ಪೂರ್ವಾನ್ವಯವಾಗಿ ಸೆಪ್ಟೆಂಬರ್‌ನಲ್ಲಿ ಹೊಸ ವೇತನ ಕೈ ಸೇರುತ್ತದೆ ಎಂದು ಹೇಳಲಾಗಿತ್ತು. ಆದರೆ, ಆಗಸ್ಟ್ ತಿಂಗಳು ಮುಗಿಯುವ ಹಂತಕ್ಕೆ ಬಂದಿದ್ದರೂ ಇದುವರೆಗೂ ಪರಿಷ್ಕೃತ ವೇತನ ಪ್ರಕ್ರಿಯೆ ಅಪ್‌ಡೇಟ್ ಆಗಿಲ್ಲ ಎನ್ನಲಾಗಿದ್ದು, ವೇತನ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಆದುದರಿಂದಾಗಿ ಪರಿಷ್ಕೃತ ವೇತನ ಸಿಗುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ರಾಜ್ಯ ಸರಕಾರವು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವೇತನ ಶ್ರೇಣಿ ಮತ್ತು ಭತ್ತೆ ಪರಿಷ್ಕರಣೆ ಕುರಿತು ಔರಾದ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಅದು ಅದ್ಯಯನ ನಡೆಸಿ ಶೇ.30 ರಷ್ಟು ವೇತನ ಹೆಚ್ಚಿಸುವಂತೆ ಶಿಫಾರಸು ಮಾಡಿ ವರದಿ ಸಲ್ಲಿಸಿತ್ತು. ಅದನ್ನು ಅಧ್ಯಯನ ನಡೆಸಿದ ಹಿಂದಿನ ಮೈತ್ರಿ ಸರಕಾರವು ಪೇದೆ ಮತ್ತು ಮುಖ್ಯ ಪೇದೆಗಳಿಗೆ ಶೇ.100 ರಷ್ಟು ವೇತನ ಹೆಚ್ಚಿಸಿ, ಉಳಿದವರಿಗೆ ಶೇ.15 ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿತ್ತು.

ಪೇದೆಗಳಿಗೆ 23,500 ರೂ.ನಿಂದ 47,650 ರೂ.ಗೆ ಪರಿಷ್ಕೃತ ವೇತನ ಜಾರಿಗೊಳಿಸಲಾಗಿದೆ. ಆದರೆ, ಈಗಾಗಲೇ ಪೇದೆಯ ಆರಂಭಿಕ ವೇತನ 23,500 ರೂ. ತಲುಪಿದ್ದರಿಗೆ ಅವರಿಗೆ ಪರಿಷ್ಕೃತ ವೇತನದಿಂದ ಉಪಯೋಗವಿಲ್ಲ. 2014 ಕ್ಕಿಂತ ಮೊದಲು ಪೇದೆಯಾಗಿ ನೇಮಕಗೊಂಡು ಈಗಲೂ ಕಾನ್ಸ್‌ಟೇಬಲ್ ಆಗಿಯೇ ಮುಂದುವರಿದಿದ್ದರೆ ವೇತನ ಏರಿಕೆ ಆಗುವುದಿಲ್ಲ ಎಂಬುದು ಸೇರಿ ಯಾರಿಗೆ ಎಷ್ಟು ಜಾಸ್ತಿಯಾಗುತ್ತದೆ ಎಂಬ ಗೊಂದಲದಲ್ಲಿದ್ದರು.

ಸೆಪ್ಟೆಂಬರ್‌ನಲ್ಲಿ ವೇತನ ಬಂದ ನಂತರ ಸೃಷ್ಟಿಯಾಗಿರುವ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಈ ಬಾರಿ ಸಂಬಳ ಬರುವ ನಿರೀಕ್ಷೆಯೂ ಹುಸಿಯಾಗುವ ಸಾಧ್ಯತೆಯಿದೆ. ಮತ್ತೊಂದು ಕಡೆ ನೆರೆ, ಪ್ರವಾಹದಿಂದಾಗಿ ಪರಿಷ್ಕೃತ ವೇತನ ತಡೆ ಹಿಡಿದು, ಹಳೆ ವೇತನ ಶ್ರೇಣಿಯಂತೆ ಬಿಡುಗಡೆ ಮಾಡಿ, ಮುಂದಿನ ದಿನಗಳಲ್ಲಿ ನೀಡುತ್ತಾರೆ ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News