ಕೋಮು ಗಲಭೆ ತಡೆಯಲು ಸಂಕಲ್ಪ ಮಾಡಬೇಕು: ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

Update: 2019-08-22 18:08 GMT

ದಾವಣಗೆರೆ, ಆ.22: ಕೋಮುವಾದದ ದಳ್ಳುರಿ ಹೊತ್ತಿ ಉರಿಯುತ್ತದೆ. ನಾವು ಅದಕ್ಕೆ ಬಲಿಯಾಗಬಾರದು. ಕೋಮು ಗಲಭೆ ತಡೆಯಲು ಸಂಕಲ್ಪ ಮಾಡಬೇಕು ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ  ಹೇಳಿದರು. 

ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ 'ಮತ್ತೆ ಕಲ್ಯಾಣ' ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬರು ಪ್ರಶ್ನೆಗೆ ಉತ್ತರಿಸಿದರು. 

ಕೋಮು ಗಲಭೆಗಳು ನಡೆಯುತ್ತಲೇ ಇರುತ್ತವೆ. ನಾವು ಸುಮ್ಮನಿದ್ದರೂ ನಮ್ಮವರ ಮೇಲೆಯೇ ದಾಳಿ, ದೌರ್ಜನ್ಯಗಳು ನಡೆಯುತ್ತವೆ. ಮತ್ತೊಂದು ಕೋಮಿನವರು ಒಗ್ಗಟ್ಟಿನಿಂದ ನಮ್ಮವರ ಮೇಲೆ ಹಲ್ಲೆ, ದೌರ್ಜನ್ಯ ಮಾಡುತ್ತಾರೆ. ಈ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು ಎಂದು ವಿದ್ಯಾರ್ಥಿ ಶ್ರೀ ಗಳನ್ನು ಪ್ರಶ್ನಿಸಿದರು. 

ಅದಕ್ಕೆ ಪ್ರತಿಕ್ರಿಯಿಸಿದ ಡಾ.ಪಂಡಿತಾರಾಧ್ಯ ಸ್ವಾಮೀಜಿ, ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು, ದಾರ್ಶನಿಕರು ಸಮಾನತೆ, ಸಹೋದರತ್ವ, ಜಾತ್ಯತೀತ ಸಮಾಜದ ಸಂದೇಶವನ್ನೇ ಸಾರಿದ್ದಾರೆ. ಸಾಹಿತ್ಯವೂ ಇದನ್ನೇ ಹೇಳಿದ್ದರೆ, ಸಂವಿಧಾನವೂ ಇದೇ ಸಂದೇಶ ನೀಡುತ್ತದೆ. ಕೋಮು ಗಲಭೆಯಲ್ಲಿ ನಾವೂ ಭಾಗಿಯಾಗುವ ಬದಲಿಗೆ, ಅದನ್ನು ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಶೀಲರಾಗಬೇಕು. ನಾನು ಕೋಮು ಗುಂಪಿನಲ್ಲಿ ಗುರುತಿಸಿಕೊಳ್ಳುವುದಿಲ್ಲವೆಂಬ ಸಂಕಲ್ಪ ನಮಗೆ ನಾವೇ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಮತ್ತೊಂದು ಕಾಲೇಜು ವಿದ್ಯಾರ್ಥಿನಿ ಮಾತನಾಡಿ, ದೇವರು ವರ, ಶಾಪ ಕೊಡುತ್ತಾನೆಂಬ ನಂಬಿಕೆ ಇದೆ. ನಿಜವೇ ಎಂಬ ಪ್ರಶ್ನೆ ಮುಂದಿಟ್ಟರು. ಅದಕ್ಕೆ ಪ್ರತಿಕ್ರಿಯಿಸಿದ ಸಾಣೇಹಳ್ಳಿ ಶ್ರೀಗಳು, ದೇವರು ವರ ಕೊಡುತ್ತಾನೆ, ಶಾಪ ಕೊಡುತ್ತಾನೆಂಬ ನಂಬಿಕೆ ಹುಟ್ಟು ಹಾಕಿದ್ದೇ ಕೆಲ ಪಟ್ಟಭದ್ರ ಹಿತಾಸಕ್ತಿಗಳು, ಪೂಜಾರಿಗಳು. 12ನೇ ಶತಮಾನದಲ್ಲಿ ಬಸವಣ್ಣ ದೇಹವೇ ದೇಗುವೆಂದು ಸಾರಿ, ಇಷ್ಟಲಿಂಗ ಪೂಜೆ ಮಾಡಿಸಿದರು. ಬಸವಾನುಯಾಯಿ ಎನ್ನುವವರೇ ಇಂದು ದೇಗುಲ ಕಟ್ಟಿ, ಪೂಜಾರಿ ಇಡುತ್ತಾರೆ. ಆ ಪೂಜಾರಿ ಎಷ್ಟು ದಿನದಲ್ಲಿ ಬದಲಾಗಿ ಏನು ಮಾಡುತ್ತಾನೆಂಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ವಿದ್ಯಾರ್ಥಿ ಜಾತಿ ಆದಾರದಲ್ಲಿ ಶಾಲೆ, ಕಾಲೇಜಿನಲ್ಲಿ ಸೌಲಭ್ಯ ನೀಡುವ ಸರ್ಕಾರದ ಧೋರಣೆ ಪ್ರಶ್ನಿಸಿದಾಗ ಸಾಣೇಹಳ್ಳಿ ಶ್ರೀಗಳು ಮಾತನಾಡಿ, ಒಂದು ಕುಟುಂಬದ ನಾಲ್ವರಲ್ಲಿ ಶಕ್ತಿ ಹೀನನಾದ ಮಗನ ಮೇಲೆ ತಾಯಿ ಅಕ್ಕರೆ ಹೆಚ್ಚು. ಅದೇ ರೀತಿ ಸರ್ಕಾರ ಮಾಡಿದೆಯಷ್ಟೇ ಎಂದರು. 

ಕಾಲೇಜು ವಿದ್ಯಾರ್ಥಿಯೊಬ್ಬ ಮಾತನಾಡಿ, ನಾವು ಎಷ್ಟೇ ಹೇಳಿದರೂ ಹಿರಿಯರು ಬದಲಾಗುವುದಿಲ್ಲ. ಇದೇ ಕಾರಣಕ್ಕೆ ಭವಿಷ್ಯದ ಪ್ರಜೆಗಳಾದ ಮಕ್ಕಳು ದೇವಾಲಯದ ಭ್ರಮೆಯಿಂದ ಹೊರ ಬನ್ನಿ. ನೀವು ಓದದೇ ದೇವರು ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಿಲ್ಲ. ಕಷ್ಟಪಟ್ಟು ದುಡಿಯದೇ ಸಂಬಳ, ಸಂಪತ್ತು ಕಾಣುವುದಕ್ಕೂ ಸಾಧ್ಯವಿಲ್ಲ ಎಂದು ಹೇಳಿದರು.   

ರಾಜ್ಯಸಭೆ ಮಾಜಿ ಸದಸ್ಯ ಕೆ.ಆರ್.ಜಯದೇವಪ್ಪ, ಸಹಮತ ವೇದಿಕೆ ಗೌರವಾಧ್ಯಕ್ಷ, ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ ವೇದಿಕೆ ಅಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ ಕುರ್ಕಿ, ಎ.ಆರ್.ಉಜ್ಜಿನಪ್ಪ, ದೇವರಮನೆ ಶಿವಕುಮಾರ, ಡಿ.ಬಸವರಾಜ, ಎಚ್.ಕೆ.ಬಸವರಾಜ, ಡಿ.ಬಸವರಾಜ, ಹನುಮಂತ ನಾಯ್ಕ, ಕೆ.ಎಸ್.ಬಸವಂತಪ್ಪ, ಎಂಶಿವಕುಮಾರ, ನಾಗರಾಜ ಲೋಕಿಕೆರೆ, ಮಹಾಂತೇಶ ಅಂಗಡಿ, ಬಸವರಾಜ ಶಿವಗಂಗಾ, ಶಶಿಧರ ಹೆಮ್ಮನಬೇತೂರು, ಬಿ.ಕೆ.ಪರಶುರಾಮ ಮಾಗಾನಹಳ್ಳಿ, ಜಿಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಮಹೇಶ, ಎಚ್.ಸಿ.ಜಯಮ್ಮ ಇತರರು ಇದ್ದರು.  

ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಬಿಇಡಿ ಕಾಲೇಜು ಪ್ರಶಿಕ್ಷಣಾರ್ಥಿಗಳಾದ ವೈ.ಬಿ.ವಿದ್ಯಾ, ಪೂರ್ಣಿಮಾ, ಸುಮಿತ್ರಾ, ಎಸ್.ವಿನಯ್, ಯಾಸ್ಮಿನ್, ಆಶಾ ಸೇರಿದಂತೆ ಅನೇಕರು ಸಂವಾದದಲ್ಲಿ ತಮ್ಮ ಪ್ರಶ್ನೆ ಕೇಳಿ ಗಮನ ಸೆಳೆದರು.

ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಹಿನ್ನಲೆಯಲ್ಲಿ ಗುರುವಾರ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಾಮರಸ್ಯದ ನಡೆಗೆ ಕಾರ್ಯಕ್ರಮ ನಡೆಯಿತು.

ಈ ವೇಳೆ ಚನ್ನಗಿರಿ ಪಾಂಡೋಮಟ್ಟಿ ಮಠದ ಶ್ರೀಗಳು, ಮೌಲವಿಗಳು, ಸೈಯದ್ ಸೈಫುಲ್ಲಾ, ಪ್ರೋ.ಮುರುಗೇಂದ್ರಪ್ಪ, ಎಂ.ಜಿ.ಈಶ್ವರಪ್ಪ, ಮಂಜುನಾಥ ಕುರ್ಕಿ, ಡಿ.ಬಸವರಾಜ್, ವಿವಿಧ ರಾಜಕೀಯ ಮುಖಂಡರುಗಳು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News