ನಮ್ಮ ಪಕ್ಷದ ಶಾಸಕರ ಯಾವುದೇ ಕೆಲಸಗಳನ್ನು ಕುಮಾರಸ್ವಾಮಿ ಮಾಡಿಕೊಡಲಿಲ್ಲ: ಎನ್.ಚಲುವರಾಯಸ್ವಾಮಿ

Update: 2019-08-23 12:27 GMT

ಬೆಂಗಳೂರು, ಆ.23: 37 ಶಾಸಕರನ್ನು ಹೊಂದಿದ್ದ ಜೆಡಿಎಸ್ ಪಕ್ಷಕ್ಕೆ 80 ಶಾಸಕರಿದ್ದ ಕಾಂಗ್ರೆಸ್ ಬೆಂಬಲ ನೀಡಿತ್ತು. ಆದರೆ, ನಮ್ಮ ಪಕ್ಷದ ಶಾಸಕರ ಯಾವುದೇ ಕೆಲಸಗಳನ್ನು ಕುಮಾರಸ್ವಾಮಿ ಮಾಡಿಕೊಡಲಿಲ್ಲ. ಮೈತ್ರಿ ಸರಕಾರ ಪತನಕ್ಕೆ ಕುಮಾರಸ್ವಾಮಿಯೇ ಕಾರಣ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ರೇವಣ್ಣರನ್ನು ಅಮಾಯಕ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿಕೆ ನೀಡಿದ್ದರು. ರೇವಣ್ಣ ಹಸ್ತಕ್ಷೇಪವಿಲ್ಲದೇ ಎಂಟಿಬಿ ನಾಗರಾಜ್ ಜವಾಬ್ದಾರಿ ಹೊತ್ತಿದ್ದ ವಸತಿ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಹೇಗಾಯಿತು ಎಂದು ಪ್ರಶ್ನಿಸಿದರು.

ಮುಂದಿನ ದಿನಗಳಲ್ಲಿ ಉಪ ಚುನಾವಣೆಗಳು ಎದುರಾಗಬಹುದು. ಅದರಲ್ಲಿಯೂ ದೇವೇಗೌಡರ ಕುಟುಂಬದ ಸದಸ್ಯರೇ ನಿಲ್ಲಲಿ, ನಮ್ಮದೇನು ಅಭ್ಯಂತರವಿಲ್ಲ. ಅಧಿಕಾರಿಗಳ ವರ್ಗಾವಣೆ ಸೇರಿ ಪ್ರಮುಖ ನಿರ್ಧಾರಗಳಲ್ಲಿ ಕಾಂಗ್ರೆಸ್ ನಾಯಕರನ್ನು ಅವರು ಎಷ್ಟರಮಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ಕುಮಾರಸ್ವಾಮಿ ವರ್ತನೆಯಿಂದ ಮೈತ್ರಿ ಸರಕಾರ ಪತನವಾಗಿದೆಯೇ ಹೊರತು, ಅದಕ್ಕೆ ಸಿದ್ದರಾಮಯ್ಯ ಕಾರಣರಲ್ಲ. ನಮ್ಮ ಕ್ಷೇತ್ರಗಳಲ್ಲಿ ಜೆಡಿಎಸ್‌ನಿಂದ ಎಷ್ಟೇ ಕಿರುಕುಳವಾದರೂ ಸಿದ್ದರಾಮಯ್ಯ ಮಾತಿಗೆ ಗೌರವ ಕೊಟ್ಟು ನಾವು ಮೈತ್ರಿ ಸರಕಾರದ ವಿರುದ್ಧ ಚಕಾರವೆತ್ತದೆ ಮೌನವಾಗಿದ್ದೆವು ಎಂದು ಅವರು ಹೇಳಿದರು.

ಮತ್ತೊಂದೆಡೆ ಮಾಜಿ ಸಚಿವ ಎ.ಮಂಜು ಮಾತನಾಡಿ, ಸಿದ್ದರಾಮಯ್ಯ ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡಿದ್ದಾರೆ. ಜೆಡಿಎಸ್ ಮೈತ್ರಿಯಿಂದ ಏನು ಲಾಭವಾಯಿತು ಎಂಬುದು ಈಗಲಾದರೂ ಅವರಿಗೆ ಅರಿವಾಗಿದೆಯಲ್ಲಾ. ಜೆಡಿಎಸ್ ಕುಟುಂಬ ರಾಜಕಾರಣ ಬಿಟ್ಟಿರಲ್ಲ. ಉಪಚುನಾವಣೆಯಲ್ಲಿ ಅವರ ಕುಟುಂಬದವರು ಎಷ್ಟು ಜನ ಸ್ಪರ್ಧಿಸುತ್ತಾರೆ ನೋಡಬೇಕು ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News