ಅನರ್ಹ ಶಾಸಕರ ಕಿವಿಗೆ ‘ಬಿಜೆಪಿ ಹೂ ಮುಡಿಸಿದೆ’: ಮಾಜಿ ಸಚಿವ ಶಿವರಾಜ್ ತಂಗಡಗಿ

Update: 2019-08-23 13:39 GMT

ಬೆಂಗಳೂರು, ಆ. 23: ‘ರಾಜೀನಾಮೆ ನೀಡಿ ಅನರ್ಹ ಆದ ಮೇಲೆ ಶಾಸಕರು ಅನುಭವಿಸುವ ಕಷ್ಟವೇನೆಂದು ನನಗೆ ಚೆನ್ನಾಗಿ ಗೊತ್ತು. ಅನರ್ಹ ಶಾಸಕರ ಕಿವಿಗೆ ಬಿಜೆಪಿ ಸರಿಯಾಗಿಯೇ ಹೂ ಮುಡಿಸಿದೆ’ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಲೇವಡಿ ಮಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಹಿಂದೆ ನಾನೂ ಶಾಸಕ ಸ್ಥಾನದಿಂದ ಅನರ್ಹನಾಗಿ ಸಂಕಷ್ಟ ಅನುಭವಿಸಿದ್ದೇನೆ. ಈ ಹಿಂದೆ ನನಗೆ ಬಂದ ಕಷ್ಟ, ಈಗ ನಮ್ಮ ಮಿತ್ರರು ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹ ಶಾಸಕರು ಅಷ್ಟು ಸುಲಭವಾಗಿ ಪ್ರಕರಣವನ್ನು ಗೆದ್ದು ಬಂದು ಸಚಿವರು ಆಗಲು ಸಾಧ್ಯವಿಲ್ಲ ಎಂದ ಅವರು, ಬಿಜೆಪಿಯವರ ಮಾತನ್ನು ನಂಬಬೇಡಿ ಎಂದು ನಾನು ಈ ಹಿಂದೆ ಹೇಳಿದ್ದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಬಿಜೆಪಿಯವರು ಏನೇನೋ ಭರವಸೆ ನೀಡಿ ಇದೀಗ ಸರಕಾರ ರಚನೆ ಬಳಿಕ ಅವರೆಲ್ಲರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಹೀಗಾಗಿ ಬಿಜೆಪಿ ಆಶ್ವಾಸನೆಗಳನ್ನು ನಂಬಬೇಡಿ. ಏಕೆಂದರೆ ಅವರು ಸಿಎಂ ಸ್ಥಾನವೊಂದು ಬಿಟ್ಟು ಉಳಿದೆಲ್ಲಾ ಸ್ಥಾನವನ್ನು ನೀಡುತ್ತೇವೆ ಎಂದು ಹೇಳುತ್ತಾರೆ. ಗೃಹ, ಲೋಕೋಪಯೋಗಿ, ಹಣಕಾಸು ಸೇರಿದಂತೆ ಎಲ್ಲ ಖಾತೆಗಳನ್ನು ನಿಮಗೆ ಕೊಡ್ತೀವಿ ಎಂದು ಬಿಜೆಪಿಯವರು ಹೇಳುತ್ತಾರೆ ಎಂದು ಟೀಕಿಸಿದ ಅವರು, ಬಿಜೆಪಿಯವರು ಕೊಟ್ಟ ಭರವಸೆಯನ್ನು ಈಡೇರಿಸುವುದಿಲ್ಲ. ಯಾರು ತಮಗೆ ಬೆಂಬಲ ನೀಡುತ್ತಾರೋ ಅವರನ್ನೇ ಅವರು ಮೊದಲು ತುಳಿಯುತ್ತಾರೆ ಎಂದು ಟೀಕಿಸಿದರು.

ಅನರ್ಹ ಶಾಸಕರಿಗೆ ಯಾವುದೇ ಕಾರಣಕ್ಕೂ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿ ಮಾಡಲು ಸಾಧ್ಯವಿಲ್ಲ. ಮೊದಲಿನಂತೆ ಇದೀಗ ಬಿಜೆಪಿ ಹೈಕಮಾಂಡ್ ಇಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲವೂ ನಡೆಯಬೇಕೆಂದು ಬಿಜೆಪಿ ಹೈಕಮಾಂಡ್ ಭಾವಿಸಿದೆ ಎಂದು ಅವರು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News