ಶಾಸನ ಸಭೆಯಲ್ಲಿ ದಲಿತ ಪರ ಧ್ವನಿ ಕ್ಷೀಣಿಸಿದೆ: ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

Update: 2019-08-23 14:36 GMT

ಕೋಲಾರ, ಆ.23: ಇಡೀ ಸಮಾಜಕ್ಕೆ ಕ್ಯಾನ್ಸರ್ ನಂತೆ ಆವರಿಸಿಕೊಂಡಿರುವ ಅಸ್ಪೃಶ್ಯತೆಗೆ ಚಿಕಿತ್ಸೆ ನೀಡಬೇಕಾದ ಸಂದರ್ಭದಲ್ಲಿ, ಶಾಸನ ಸಭೆಯಲ್ಲಿ ದಲಿತಪರ ಧ್ವನಿ ಕ್ಷೀಣವಾಗಿದೆ. ಇನ್ನಾದರೂ ಎಚ್ಚ ರವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಯ ವ್ಯಕ್ತಪಡಿಸಿದರು. 

ಇಲ್ಲಿನ ತೇರಹಳ್ಳಿ ಬೆಟ್ಟದ ಮೇಲಿನ ಶಿವಗಂಗೆಯ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಬಿ.ಬಸವಲಿಂಗಪ್ಪನವರ ನಂತರ ಶಾಸನ ಸಭೆಯಲ್ಲಿ ದಲಿತರ ಪರ ಮಾತನಾಡುವ ಧ್ವನಿಯೇ ಇಲ್ಲವಾಗಿದೆ. ಇಂದಿನ ದಲಿತ ಜನಪ್ರತಿನಿಧಿಗಳಿಗೆ ಶಾಸನ ಸಭೆಯಲ್ಲಿ ಮಾತನಾಡಲೂ ಆಗದ ಸ್ಥಿತಿಗೆ ತಲುಪಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು. 

ಬಾಬಾ ಸಾಹೇಬ್ ಅಂಬೇಸ್ಕರ್ ತಮಗಾದ ಅವಮಾನಗಳನ್ನೇ ಸಾಧನೆಯ ಮೆಟ್ಟಿಲುಗಳಾಗಿಸಿಕೊಂಡರು. ಅದೇ ರೀತಿ ಕರ್ನಾಟಕದಲ್ಲಿ ದಸಂಸ ಸಂಸ್ಥಾಪಕ ಬಿ.ಕೃಷ್ಣಪ್ಪನವರು ಹೋರಾಟದ ಸಂದರ್ಭಗಳಲ್ಲೂ ಸಮಚಿತ್ತವನ್ನು, ದೂರದೃಷ್ಠಿಯನ್ನು ಕಳೆದುಕೊಂಡಿರಲಿಲ್ಲ, ಇಂದು ದಲಿತ ಹೋರಾಟಗಳು ಬ್ಲಾಕ್ ಮೇಲ್ ತಂತ್ರಗಳಾಗಿವೆ, ಲೆಟರ್ ಹೆಡ್ ಸಂಸ್ಕೃತಿ ಕೊನೆಯಾಗಬೇಕು. ದಲಿತ ಸಂಘಟನೆಗಳು ದಲಿತರಿಗೆ ದೇವಸ್ಥಾನ ಪ್ರವೇಶ ಮಾಡಬೇಕು ಎನ್ನುವ ಹೋರಾಟಗಳಿಗೆ ಸೀಮಿತವಾಗದೇ ದಲಿತರು ಗ್ರಾಮ ಪಂಚಾಯತ್ ನಿಂದ ಶಾಸನಸಭೆಗಳ ಆಡಳಿತ ಶಕ್ತಿಯಾಗಿ ಒಳ್ಳೆಯ ಕನಸುಗಳನ್ನು ದಲಿತರಿಗೆ ಕೊಡಬೇಕಾಗಿದೆ ಎಂದರು. ಶಾಸನಸಭೆಗಳು ಮಾತ್ರ ನಮಗೆ ಶಾಶ್ವತ ವಿಮೋಚನೆಗೆ ದಾರಿ ತೋರಬಲ್ಲದು ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಚಳುವಳಿ ನಾಯಕರ ಎದೆಯಲ್ಲಿ ಧೈರ್ಯ, ಸ್ಥೈರ್ಯ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಆದರೆ, ನಮ್ಮೊಳಗೇ ಅಂಬೇಡ್ಕರ್ ಚಿಂತನೆಗಳು ಚಿಗುರಬೇಕು. ಇಡೀ ಜಗತ್ತಿಗೇ ಆದರ್ಶವಾಗಿರುವ ಅಂಬೇಡ್ಕರ್ ನಮ್ಮ ಮನೆಗಳ,ಮುಂದಿನ ಪೀಳಿಗೆಯ ಮಕ್ಕಳ ಆದರ್ಶವಾದಾಗಬೇಕು ಎಂದು ಕರೆ ನೀಡಿದರು. 

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಮಾತನಾಡಿ, ನಲವತ್ತು ವರ್ಷಗಳ ಸುಧೀರ್ಘ ದಲಿತ ಚಳುವಳಿಯ ಇತಿಹಾಸದಲ್ಲಿ, ರಾಜ್ಯಾದ್ಯಂತ ಹಮ್ಮಿಕೊಂಡ ಬಹುತೇಕ ಹೋರಾಟಗಳು ಇಂಜಿನೀಯರ್ ಗಳ ಭಡ್ತಿಗೆ ಸೀಮಿತವಾಗ ತೊಡಗಿದ ಹಿನ್ನಲೆ ಚಳುವಳಿ ಛಿದ್ರವಾಗಿದೆ. ಪ್ರೊ.ಬಿ.ಕೃಷ್ಣಪ್ಪ ನವರ ದೂರದೃಷ್ಠಿಯ ಕಾರಣ ಇಂದಿಗೂ ಕಾರ್ಯಕರ್ತರ ಹಂತದಲ್ಲಿ ಚಳುವಳಿ ಇನ್ನೂ ಉಳಿದಿದೆ, ಕಾರ್ಯಕರ್ತರು ಮುಖಂಡರು ಅಪ್‍ಡೇಟ್ ಆಗಿರಬೇಕು, ಅಧ್ಯಯನ ಶಿಬಿರಗಳ ಮೂಲಕ ಜ್ಞಾನವನ್ನು ವೃದ್ಧಿಸಿಕೊಂಡು ತಮ್ಮ ವ್ಯಾಪ್ತಿಯಲ್ಲಿ ಸವಾಲಾಗಿ ನಿಲ್ಲುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾರ್ಯೋನ್ಮುಖರಾಗಬೇಕು ಎಂದರು. 

ಮುಂದಿನ ಮೂರು ದಿನಗಳಲ್ಲಿ ಸುಮಾರು 6 ಗೋಷ್ಠಿಗಳಲ್ಲಿ ವಿವಿಧ ವಿಷಯಗಳನ್ನು ಆಧರಿಸಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಮಂಡನೆ, ಚರ್ಚೆ, ಸಂವಾದಗಳ ಮೂಲಕ ಪ್ರಸ್ತುತ ಸನ್ನಿವೇಶದಲ್ಲಿ ಸಮಾಜದ ಎಲ್ಲಾ ರೀತಿಯ ಸವಾಲುಗಳಿಗೆ ತಮ್ಮನ್ನು ಅಣಿಯಾಗಿಸಿಕೊಳ್ಳಲು ಸನ್ನದ್ದರಾಗಬೇಕು ಎಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್, ಎಸ್.ಎನ್.ಮಲ್ಲಪ್ಪ, ವಿಜಯನರಸಿಂಹ, ಎಸ್.ವಿಘ್ನೇಶ್, ಜೆ.ಶ್ರೀನಿವಾಸಲು, ಮರೀಶ್ ನಾಗಣ್ಣವರ್, ನಾಗನಾಳ ಮುನಿಯಪ್ಪ, ಮುನಿಚೌಡಪ್ಪ, ಪುರಯಲ್ಲಪ್ಪ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News