ತುಮಕೂರು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ, ಕುಡಿಯುವ ನೀರಿಗೆ ತೊಂದರೆಯಿಲ್ಲ: ಸಚಿವ ಮಾಧುಸ್ವಾಮಿ

Update: 2019-08-23 14:42 GMT

ತುಮಕೂರು, ಆ.23: ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ನೀರಿನ ಮಟ್ಟ ಹೆಚ್ಚಾಗಿದೆ. ಹೇಮಾವತಿ ನೀರನ್ನು ತುಮಕೂರು ನಾಲೆಗೆ ಆ.9 ರಿಂದ ಹರಿಸಿದ್ದು, ನಗರ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗೊರೂರು ಹೇಮಾವತಿ ಜಲಾಶಯದಿಂದ ಜಿಲ್ಲೆಯ ಕುಡಿಯುವ ನೀರಿನ ಯೋಜನೆ ಗಳಿಗೆ ಹಾಗೂ ಕೆರೆಕಟ್ಟೆಗಳಿಗೆ ಸಮರ್ಪಕವಾಗಿ ನೀರು ಹರಿಸಲಾಗುತ್ತಿರುವ ಬಗ್ಗೆ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ರೈತರಿಗೆ ಹಾಗೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಜಲಾಶಯದಿಂದ ಆ.30ರವರೆಗೂ ನೀರು ಹರಿಸಲಾಗುವುದು. ನಂತರ ತಾಲೂಕುವಾರು ನೀರು ಹಂಚಿಕೆ ಮಾಡುವುದರ ಬಗ್ಗೆ ಶಾಸಕರ ಸಭೆ ನಡೆಸಿ ನೀರು ಹರಿಸುವುದರ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಕುಣಿಗಲ್ ತಾಲೂಕಿಗೆ ಪ್ರತ್ಯೇಕ ನಾಲೆ(ಎಕ್ಸ್ ಪ್ರೆಸ್ ಕೆನಾಲ್) ನಿರ್ಮಾಣದ ಅಗತ್ಯವಿಲ್ಲ. ಜಿಲ್ಲೆಯ ಬಹುತೇಕ ಶಾಸಕರು ಈ ಯೋಜನೆಯನ್ನು ವಿರೋಧಿಸಿದ್ದು, ಸಚಿವ ಸಂಪುಟ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿದೆ. ಪ್ರತ್ಯೇಕ ನಾಲೆಯ ಬದಲಾಗಿ ಈಗಿರುವ ನಾಲೆಯ ಆಧುನೀಕರಣಕ್ಕಾಗಿ 1005 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಆಧುನೀಕರಣಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.

ಕುಣಿಗಲ್ ಶಾಸಕ ಡಾ.ರಂಗನಾಥ್ ಮಾತನಾಡಿ, ಕುಣಿಗಲ್ ಕ್ಷೇತ್ರಕ್ಕೆ ಪ್ರತ್ಯೇಕ ನಾಲೆಯ ಅವಶ್ಯಕವಿದ್ದು, ಹೊಸ ನಾಲೆಯ ನಿರ್ಮಾಣದ ಕುರಿತು ತಮಗೂ ಹಾಗೂ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗುವುದು ಎಂದರು. 

ಶಾಸಕ ಜ್ಯೋತಿಗಣೇಶ್ ಮಾತನಾಡಿ, ತುಮಕೂರು ನಗರಕ್ಕೆ 2 ಟಿಎಂಸಿ ನೀರು ಅವಶ್ಯಕವಿದೆ. ಅಲ್ಲದೇ ಮೈದಾಳ ಕೆರೆಯಿಂದ ಸಿದ್ದಗಂಗಾ ಮಠಕ್ಕೆ ಪೈಪ್‍ಲೈನ್ ಮೂಲಕ ನೀರು ಹರಿಸಬೇಕು ಎಂದು ಸಚಿವರ ಗಮನಕ್ಕೆ ತಂದರು.

ನಂತರ ಮಾತನಾಡಿದ ಸಚಿವರು, ರೈತರಿಗೆ ಈ ಬಾರಿ ನೀರಿನ ಸಮಸ್ಯೆಯಾಗುವುದಿಲ್ಲ. ಹೇಮಾವತಿ ನಾಲೆಯಿಂದ ಹಂಚಿಕೆ ಯಾಗಿರುವ 25.3 ಟಿಎಂಸಿ ನೀರನ್ನು ಸಂಪೂರ್ಣವಾಗಿ ಕುಡಿಯಲು, ಕೆರೆ-ಕಟ್ಟೆಗಳಿಗೆ ಬಳಕೆ ಮಾಡಿಕೊಂಡು ನಂತರ ಮಠಕ್ಕೆ ನೀರು ಹರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಎಂದರಲ್ಲದೇ ನಾಲೆಯ ಆಧುನೀಕರಣದ ವೇಳೆಯಲ್ಲಿ ನಾಲೆಯಲ್ಲಿ ಉಳಿದುಕೊಂಡಿರುವ ತ್ಯಾಜ್ಯವನ್ನು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಿರಾ ಶಾಸಕ ಸತ್ಯನಾರಾಯಣ ಮಾತನಾಡಿ, ಕುಣಿಗಲ್, ತುಮಕೂರು ತಾಲೂಕುಗಳಿಗೆ ನೀರಿನ ಸಮಸ್ಯೆಯಿಲ್ಲ. ಆದರೆ ಶಿರಾ ತಾಲೂಕಿನಲ್ಲಿ ಕಳೆದ 2 ತಿಂಗಳಿನಿದ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಸಾವಿರ ಅಡಿ ಆಳ ಕೊರೆದರೂ ಕಲುಷಿತವಾದ ನೀರು ಸಿಗುತ್ತಿದೆ. ಕೂಡಲೇ ನಮಗೆ ನೀರು ಬಿಡುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಜಿಲ್ಲೆಗೆ ಆ.30ರ ವರೆಗೆ ನೀರು ಹರಿಸಲಾಗುವುದು. ಸಭೆಯಲ್ಲಿ ಜಿಲ್ಲಾಧಿಕಾರಿಗಳು ಗೈರು ಹಾಜರಿದ್ದು, ಆ.30ರ ನಂತರ ಶಾಸಕರ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. 

ತಿಪಟೂರು ಶಾಸಕ ಬಿ.ಸಿ ನಾಗೇಶ್ ಮಾತನಾಡಿ, ಬಹುಗ್ರಾಮ ಕುಡಿಯುವ ನೀರು ಯೋಜನೆಯಿದ್ದರೂ ನಮ್ಮ ತಾಲೂಕಿಗೆ ನೀರಿಲ್ಲ ಎಂದು ಸಭೆಗೆ ತಿಳಿಸಿದಾಗ ಹೇಮಾವತಿ ಇಂಜಿನಿಯರ್ ಬಾಲಕೃಷ್ಣ, ಗ್ರಾಮೀಣ ಅಭಿವೃದ್ಧಿ ಯೋಜನೆಯವರು ತಮಗೆ ಯಾವುದೇ ಮಾಹಿತಿ ನೀಡದೆ ಯೋಜನೆ ಕೈಗೊಂಡಿರುವುದರಿಂದ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಬಹುಗ್ರಾಮ ಕುಡಿಯುವ ನೀರು ಯೋಜನೆಯು ಅವೈಜ್ಞಾನಿಕವಾಗಿದ್ದು, ನಾಲೆಯಿಂದ ಪ್ರತ್ಯೇಕ ಪೈಪ್‍ಲೈನ್ ಅಳವಡಿಸಿ ನೀರನ್ನು ಲಿಫ್ಟ್ ಮಾಡಿ ಹರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಸಭೆಯಲ್ಲಿ ಸಂಸದರಾದ ಜಿ.ಎಸ್.ಬಸವರಾಜು ಹಾಗೂ ನಾರಾಯಣಸ್ವಾಮಿ, ಶಾಸಕರಾದ ಎಸ್.ಆರ್.ಶ್ರೀನಿವಾಸ್, ಮಸಾಲೆ ಜಯರಾಮ್, ಬೆಮೆಲ್ ಕಾಂತರಾಜು, ತಿಪ್ಪೇಸ್ವಾಮಿ, ವೀರಭದ್ರಯ್ಯ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಸೇರಿದಂತೆ ಹೇಮಾವತಿ ನಾಲಾ ಇಂಜಿನಿಯರ್ ಗಳು, ನೀರಾವರಿ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News