ಅಕ್ರಮ ಡಿನೋಟಿಫಿಕೇಶನ್ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ 11 ಮಂದಿಗೆ ಸಮನ್ಸ್ ಜಾರಿ

Update: 2019-08-23 15:52 GMT

ಬೆಂಗಳೂರು, ಆ.23: ಅಕ್ರಮ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುವಾರ ಜನಪ್ರತಿನಿಧಿಗಳ ಕೋರ್ಟ್ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೆ.26ರಂದು ಖುದ್ದು ಹಾಜರಾಗಲು ಆದೇಶ ನೀಡಿದೆ.

1997ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಸಿದ್ದರಾಮಯ್ಯ ಅವರು ಡಿನೋಟಿಫಿಕೇಶನ್ ಮಾಡಿದರು ಎನ್ನುವ ಆರೋಪವಿದೆ. ಇನ್ನು ಮುಡಾದಿಂದ ಡಿನೋಟಿಫೈ ಆದ ಜಮೀನು ಅನ್ನು ಸಿದ್ದರಾಮಯ್ಯ ಅವರು ಖರೀದಿಸಿ ನಂತರ 2003ರಲ್ಲಿ ಅವರು ಮಾರಾಟ ಮಾಡಿದ್ದರು ಎನ್ನುವ ಆರೋಪವನ್ನು ಎದುರಿಸುತ್ತಿದ್ದಾರೆ. ಆಗ ಮುಡಾ ಸದಸ್ಯರಾಗಿದ್ದ ಗೋ.ಮಧುಸೂಧನ್, ರಾಮದಾಸ್, ಅಜಯ್ ಸೇಠ್ ಸೇರಿ ಒಟ್ಟು 11 ಮಂದಿಗೆ ಸಮನ್ಸ್ ಜಾರಿ ಮಾಡಲಾಗಿದೆ.

ಪ್ರಕರಣವೇನು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಮೈಸೂರಿನ ಹಿನಾಕಲ್‌ನಲ್ಲಿ ಅಕ್ರಮವಾಗಿ ನಿವೇಶನ ಖರೀದಿ ಮಾಡಿ ಮಾರಾಟ ಮಾಡಿದ್ದಾರೆ ಎಂಬುದರ ಬಗ್ಗೆ ದೂರುದಾರ ಗಂಗರಾಜು ನ್ಯಾಯಾಲಯದಲ್ಲಿ ದಾಖಲಿಸಿದ ದೂರಿನ ಮೇರೆಗೆ ಲಕ್ಷ್ಮೀಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಬಳಿಕ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ದೂರುದಾರ ಒಪ್ಪದ ಕಾರಣ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News