'ನಿಮಗೆ ಅನ್ಯಾಯವಾಗಲು ಬಿಡಲ್ಲ': ಅನರ್ಹ ಶಾಸಕರನ್ನು ಭೇಟಿಯಾಗಿ ಅಭಯ ನೀಡಿದ ಬಿಎಸ್‌ವೈ ?

Update: 2019-08-23 16:48 GMT

ಹೊಸದಿಲ್ಲಿ, ಆ.23: ಯಾವುದೇ ಕಾರಣಕ್ಕೂ ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ. ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ನಮ್ಮ ವಕೀಲರ ಮೂಲಕ ಮತ್ತೊಮ್ಮೆ ನಿಮ್ಮ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಸಲ್ಲಿಸುತ್ತೇವೆ ಎಂದು ಅನರ್ಹ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ಕರ್ನಾಟಕ ಭವನದಿಂದ ಹೊರಟ ಯಡಿಯೂರಪ್ಪ, ಅಜ್ಞಾತ ಸ್ಥಳದಲ್ಲಿ ಅನರ್ಹ ಶಾಸಕರನ್ನು ಭೇಟಿ ಮಾಡಿ ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಅವರೊಂದಿಗೆ ಸಚಿವ ಅಶ್ವಥ್ ನಾರಾಯಣ ಹಾಗೂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಉಪಸ್ಥಿತರಿದ್ದರು ಎನ್ನಲಾಗಿದೆ.

ಸುಪ್ರೀಂಕೋರ್ಟ್‌ನಲ್ಲಿ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿರುವುದರಿಂದ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಬರುತ್ತಿಲ್ಲ. ಆದುದರಿಂದ, ಮುಂದಿನ ರಾಜಕೀಯ ಪರಿಸ್ಥಿತಿ ಡೋಲಾಯಮಾನವಾಗಬಹುದು ಎಂಬ ಆತಂಕ ಅನರ್ಹ ಶಾಸಕರಲ್ಲಿ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಯಡಿಯೂರಪ್ಪ, ಅನರ್ಹ ಶಾಸಕರನ್ನು ಭೇಟಿ ನೀಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೋವಾ ಪ್ರವಾಸದಲ್ಲಿರುವುದರಿಂದ ಯಡಿಯೂರಪ್ಪ ಭೇಟಿಗೆ ಕಾಲಾವಕಾಶ ಸಿಕ್ಕಿಲ್ಲ. ಇಂದು ಅಥವಾ ನಾಳೆ ಹೊಸದಿಲ್ಲಿಯಿಂದ ಬೆಂಗಳೂರಿಗೆ ತೆರಳುವಂತೆ ಅನರ್ಹ ಶಾಸಕರಿಗೆ ಯಡಿಯೂರಪ್ಪ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಚಿವ ಸಂಪುಟ ರಚನೆ ವೇಳೆ ಅನರ್ಹ ಶಾಸಕರಿಗೆ ಅವಕಾಶ ಕಲ್ಪಿಸುವುದಾಗಿ ಈ ಹಿಂದೆ ಬಿಜೆಪಿ ಹೈಕಮಾಂಡ್ ಭರವಸೆ ನೀಡಿತ್ತು ಎನ್ನಲಾಗಿದೆ. ಆದರೆ, ಅನರ್ಹ ಶಾಸಕರ ಪೈಕಿ ಯಾರೊಬ್ಬರಿಗೂ ಸಂಪುಟದಲ್ಲಿ ಅವಕಾಶ ಕಲ್ಪಿಸಿಲ್ಲ. ಮತ್ತೊಂದೆಡೆ ಸುಪ್ರೀಂಕೋರ್ಟ್‌ನಲ್ಲಿ ಇವರ ಅರ್ಜಿ ವಿಚಾರಣೆಗೆ ಬರದೇ ಇರುವುದು ಅನರ್ಹ ಶಾಸಕರ ಆತಂಕಕ್ಕೆ ಕಾರಣವಾಗಿದೆ.

ಭೇಟಿ ಸಾಧ್ಯವಾಗದೆ ವಾಪಸ್

ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೋವಾ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಭೇಟಿ ಸಾಧ್ಯವಾಗದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಡಾ.ಅಶ್ವಥ್ ನಾರಾಯಣ ಹಾಗೂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಶುಕ್ರವಾರ ರಾತ್ರಿ ಹೊಸದಿಲ್ಲಿಯಿಂದ ಬೆಂಗಳೂರಿಗೆ ಹಿಂದಿರುಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News