ಪ್ರವಾಹ: ಸೌಜನ್ಯಕ್ಕಾದರೂ ಪ್ರಧಾನಿ ರಾಜ್ಯಕ್ಕೆ ಆಗಮಿಸದಿರುವುದು ಖಂಡನೀಯ- ಬಡಗಲಪುರ ನಾಗೇಂದ್ರ

Update: 2019-08-23 17:29 GMT

ಮೈಸೂರು,ಆ.23: ಸೌಜನ್ಯಕ್ಕಾದರೂ ಪ್ರಧಾನಿ ನರೇಂದ್ರ ಮೊದಿ ರಾಜ್ಯದ ನೆರೆ ಪೀಡಿತ ಪ್ರದೇಶಕ್ಕೆ ಆಗಮಿಸದೇ ಇರುವುದು ಖಂಡನಿಯ ಎಂದು ಕೇಂದ್ರ ಸರ್ಕಾರದ ವಿರುದ್ಧ ಬಡಗಲಪುರ ನಾಗೇಂದ್ರ ಕಿಡಿಕಾರಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸ್ವರಾಜ್ಯ ಇಂಡಿಯಾ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಬರ, ನೆರೆ ಎರಡೂ ಆವರಿಸಿದೆ. ಮಹಾರಾಷ್ಟ್ರ, ಕೇರಳದಲ್ಲಿ ಬಿದ್ದ ಮಳೆಯಿಂದಾಗಿ ರಾಜ್ಯದ ಡ್ಯಾಂಗಳು ತುಂಬಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಚಿವೆ ನಿರ್ಮಲ ಸೀತಾರಾಮನ್ ಸೇರಿದಂತೆ ಕೆಲವರು ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆ ಅಷ್ಟೇ. ಒಡಿಸಾದಲ್ಲಿ ನೆರೆ ಆವರಿಸಿದಾಗ ಚುನಾವಣೆ ಪ್ರಚಾರ ನಿಲ್ಲಿಸಿ ತುರ್ತು ವೈಮಾನಿಕ ಸಮೀಕ್ಷೆ ನಡೆಸಿ ಅಲ್ಲಿನ ಸಿಎಂ ಅವರನ್ನ ಖುದ್ದಾಗಿ ಭೇಟಿಯಾಗಿ ನೆರವು ಘೋಷಣೆ ಮಾಡಿದ್ದರು. ಸೌಜನ್ಯಕ್ಕಾದ್ರೂ ಪ್ರಧಾನಿ ಮೋದಿ ರಾಜ್ಯದ ನೆರೆ ಪೀಡಿತ ಪ್ರದೇಶಕ್ಕೆ ಆಗಮಿಸದೇ ಇರುವುದು ಖಂಡನೀಯ ಎಂದರು.

ದಕ್ಷಿಣ ಭಾರತದ ನೆರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದೇ ನಿರ್ಲಕ್ಷಿಸಿ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಮೋದಿ ನಡೆಗೆ ರೈತ ಸಂಘ ಖಂಡಿಸುತ್ತದೆ. ಆ.27 ರಂದು ಉತ್ತರ ಕರ್ನಾಟಕ, ಹೈದರಾಬಾದ್, ಕರ್ನಾಟಕ ಪ್ರವಾಹ ಪೀಡಿತ ಜಿಲ್ಲೆಯ ಎಪಿಎಂಸಿ ರೈತ ಭವನದಲ್ಲಿ ಸಭೆ ನಡೆಸಲಿದ್ದೇವೆ. ಕೇಂದ್ರ ಸಂಪೂರ್ಣ ನೆರೆ ಪರಿಹಾರ ನೀಡಬೇಕು. ನೆರೆ ಸಂತ್ರಸ್ತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲವಾದಲ್ಲಿ ನೆರೆ ಸಂತ್ರಸ್ತರ ಜೊತೆಗೂಡಿ ಪ್ರತಿಭಟನೆ ನಡೆಸುತ್ತೇವೆ. ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು. ಘೋಷಣೆ ಮಾಡದೇ ಇದ್ದರೇ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಇದೇ ವೇಳೆ ದಸರಾ ಅಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸೂತಕದ ಮನೆಯಲ್ಲಿ ಸಂಭ್ರಮಾಚರಣೆ ಎಷ್ಟು ಸರಿ ? ಬಿಜೆಪಿ ಸರ್ಕಾರ ಈ ಬಾರಿ ಸೂತಕದ ಮನೆಯಲ್ಲಿ ದಸರಾ ಆಚರಣೆ ಮಾಡುತ್ತಿದೆ. ಪ್ರವಾಹದಿಂದಾಗಿ ರಾಜ್ಯದ ಜನ ನಲುಗಿದ್ದಾರೆ. ಈ ಸಂದರ್ಭದಲ್ಲಿ ಸಂಭ್ರಮದ ದಸರಾ ಆಚರಣೆ ಸೂಕ್ತ ಅಲ್ಲ. ಕೇವಲ ದಸರಾ ಹೆಸರಿನಲ್ಲಿ ಬಿಜೆಪಿಗರು ಹಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ಜೇಬು ತುಂಬಿಸಿಕೊಳ್ಳುವ ತಂತ್ರ ಎಂದು ವ್ಯಂಗ್ಯವಾಡಿದರು.

ಮಾಜಿ ಗೃಹ ಸಚಿವ ಚಿದಂಬರಂ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಎಲ್ಲರೂ ಕಾನೂನಿಗೆ ತಲೆ ಬಾಗಲೇಬೇಕು. ತಪ್ಪು ಪ್ರಧಾನಿಯೇ ಮಾಡಿದರೂ ತಪ್ಪೇ. ಆದರೆ ಇಲ್ಲಿ ಸೇಡಿನ ರಾಜಕೀಯ ನಡೆಯುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಕೇಂದ್ರದಲ್ಲಿ ಯಾವುದೇ ಪಕ್ಷ ಬಂದರೂ ಎಲ್ಲರೂ ಇಲಾಖೆಗಳನ್ನು ದುರುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡುತ್ತಾರೆ. ಈ ಬಗ್ಗೆ ಸಾಕಷ್ಟು ಆರೋಪಗಳಿವೆ. ಅದೇ ರೀತಿಯಲ್ಲಿ ಸಿಬಿಐ ಕೂಡ ಬಳಕೆ ಮಾಡಲಾಗಿದೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಗೆ ಅರ್ಹರೇ ಎಂದರು. 

ಸುದ್ದಿಗೋಷ್ಠಿಯಲ್ಲಿ ದರ್ಶನ್ ಪುಟ್ಟಣ್ಣಯ್ಯ, ಲೋಕೇಶ್, ಬಸವರಾಜು, ಪುನೀತ್, ಮಂಟಕಳ್ಳಿ ಮಹೇಶ್, ಶಿವನಂಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News