ಶಾಂತಿ-ಸುವ್ಯವಸ್ಥೆಗೆ ಭಂಗ ತಂದರೆ ಕಠಿಣ ಕ್ರಮ: ಶಿವಮೊಗ್ಗ ಎಸ್ಪಿ ಕೆ.ಎಂ.ಶಾಂತರಾಜು

Update: 2019-08-23 17:43 GMT

ಶಿವಮೊಗ್ಗ, ಆ. 23: 'ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗಾಂಜಾ ಹಾವಳಿ ತಡೆಗೆ ನಿರ್ಧಾಕ್ಷಿಣ್ಯ ಕ್ರಮದ ಜೊತೆಗೆ, ಎಲ್ಲ ರೀತಿಯ ಅಗತ್ಯ ನಿಯಂತ್ರಣ ಹಾಗೂ ಜಾಗೃತಿ ಕಾರ್ಯ ಕೈಗೊಳ್ಳಲಾಗುವುದು' ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ. 

ಶುಕ್ರವಾರ ನಗರದ ಪ್ರೆಸ್ ಟ್ರಸ್ಟ್‍ನಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಗಾಂಜಾ ಹಾವಳಿ ವ್ಯಾಪಕವಾಗಿರುವುದು ತಮ್ಮ ಗಮನಕ್ಕೆ ಬಂದಿದೆ. ಹೆಚ್ಚಾಗಿ ವಿದ್ಯಾರ್ಥಿಗಳು ಗಾಂಜಾ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಶಾಲಾ-ಕಾಲೇಜುಗಳ ಬಳಿ ತಂಬಾಕು ಉತ್ಪನ್ನಗಳ ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು.

ಶಿಕ್ಷಣ ಕೇಂದ್ರಗಳಲ್ಲಿ ಮಾದಕ ವ್ಯಸನಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಿ, ವಿದ್ಯಾರ್ಥಿ ಸಮೂಹಕ್ಕೆ ಅರಿವು ಮೂಡಿಸಲಾಗುವುದು. ಹಾಗೆಯೇ ಮಾದಕ ವಸ್ತು ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. 

ಕಠಿಣ ಕ್ರಮ: ಶಾಂತಿ-ಸುವ್ಯವಸ್ಥೆಗೆ ಭಂಗ ತರುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಮುಂಬರುವ ಗಣೇಶ ಹಬ್ಬದ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಭದ್ರತಾ ಏರ್ಪಾಡುಗಳನ್ನು ಈಗಾಗಲೇ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಶಾಂತಿ ವ್ಯವಸ್ಥೆ ಕಾಪಾಡಲು ಹಾಗೂ ಅಕ್ರಮ ಚಟುವಟಿಕೆ ಹತ್ತಿಕ್ಕಲು ಇಲಾಖೆ ಕಟಿಬದ್ದವಾಗಿದೆ ಎಂದರು. 

ಶಿವಮೊಗ್ಗ ನಗರದ ಸಂಚಾರ ವ್ಯವಸ್ಥೆ ಸುಧಾರಣೆಯತ್ತ ಚಿತ್ತ ಹರಿಸಲಾಗುವುದು. ಎಲ್ಲೆಲ್ಲಿ ಸಮಸ್ಯೆಯಿದೆ ಎಂಬುವುದನ್ನು ಗುರುತಿಸಿ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಿ, ಶಾಶ್ವತ ಪರಿಹಾರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. 

ಜಾಗರೂಕರಾಗಬೇಕು: ಪೊಲೀಸ್ ಠಾಣೆಗಳಲ್ಲಿ ಸಿವಿಲ್ ವ್ಯಾಜ್ಯಗಳೇ ಅಗತ್ಯಕ್ಕಿಂತ ಹೆಚ್ಚಾಗುತ್ತಿದ್ದು, ಸಂಧಾನಗಳ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಿದರೆ ಸಾರ್ವಜನಿಕರು ನ್ಯಾಯಾಲಯಕ್ಕೆ ಅಲೆದಾಡುವುದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಂಚಕರು ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ನಾಗರಿಕರ ಬ್ಯಾಂಕ್ ಖಾತೆಯಿಂದ ಹಣ ವಂಚಿಸುತ್ತಿದ್ದಾರೆ. ಈ ಬಗ್ಗೆ ನಾಗರಿಕರು ಎಚ್ಚರದಿಂದಿರಬೇಕು ಎಂದು ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News