ಮಂಡ್ಯ: ಪ್ಲಾಸ್ಟಿಕ್ ನಿಷೇಧ ಜಾಗೃತಿ ಅಭಿಯಾನಕ್ಕೆ ಚಾಲನೆ

Update: 2019-08-23 18:07 GMT

ಮಂಡ್ಯ, ಆ.23:  ಜಿಲ್ಲಾಡಳಿತ ಹಾಗು ನಗರಸಭೆ ವತಿಯಿಂದ ಶುಕ್ರವಾರ ಪ್ಲಾಸ್ಟಿಕ್ ನಿಷೇಧ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಸ್ವತಃ ತಾವೇ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸಿದರು.

ಸಾರ್ವಜನಿಕರಲ್ಲಿ, ವ್ಯಾಪಾರಸ್ಥರಲ್ಲಿ ಹಾಗು ಸಗಟು ಮಾರಾಟಗಾರನ್ನು ಭೇಟಿಯಾಗಿ ಪ್ಲಾಸ್ಟಿಕ್ ನಿಷೇಧ ಕುರಿತ ಕರಪತ್ರಗಳನ್ನು ವಿತರಣೆ ಮಾಡಿದರು. ಇನ್ನು ಮುಂದೆ ಪ್ಲಾಸ್ಟಿಕ್ ಬಳಸಬೇಡಿ. ಜಿಲ್ಲೆಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಎಲ್ಲರು ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ಲಾಸ್ಟಿಕ್ ಎಂಬುದು ಒಂದು ಭಯಂಕರ ಹಾಗು ಹಾನಿಕಾರಕ ವಸ್ತುವಾಗಿದೆ. ಪ್ರಕೃತಿಯಲ್ಲಿ ಅದು ಸವೆಯಬೇಕಾದರೆ ನೂರಾರು ವರ್ಷಗಳು ಬೇಕಾಗುತ್ತದೆ. ಪ್ರತಿಯೊಬ್ಬ ಜನಸಾಮಾನ್ಯರು ಕೂಡ ದಿನನಿತ್ಯ ಜೀವನದಲ್ಲಿ ಪ್ಲಾಸ್ಟಿಕನ್ನು ಬಳಸಬಾರದು. ಪ್ಲಾಸ್ಟಿಕ್ ಬದಲು ಬೇರೆ ಯಾವ ವಸ್ತುವನ್ನು ಉಪಯೋಗಿಸಿಕೊಳ್ಳಲು ಅವಕಾಶವಿದೆ ಎಂದು ಅವರು ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಾಲಕ್ಕಿಗೌಡ ಮಾತನಾಡಿ, ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಯಾಗುವಂತಹದ್ದು, ಪ್ಲಾಸ್ಟಿಕ್ ಸುಡುವುದರಿಂದ ಅದರಲ್ಲಿ ಬಿಡುಗಡೆಯಾಗುವ ರಾಸಾಯನಿಕದಿಂದ ಕ್ಯಾನ್ಸರ್ ಬರುವ ಸಂಭವಿರುತ್ತದೆ. ಇದನ್ನೆಲ್ಲಾ ತಡೆಯಬೇಕಾದರೆ ಪ್ಲಾಸ್ಟಿಕ್‍ನ್ನು ಒಂದು ಕಡೆ ಶೇಖರಿಸಿ ಬೈ ಪ್ಯಾಕ್ ಸಿಸ್ಟಂನಲ್ಲಿ ಮಾರಾಟ ಮಾಡಬೇಕಾಗುತ್ತದೆ ಎಂದರು.

ಸಿಮೆಂಟ್ ಪ್ಯಾಕ್ಟರಿ ಅವರಿಗೂ ಕೂಡ ಶೇ.20 ರಷ್ಟು ಪ್ಲಾಸ್ಟಿಕನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಕೇಳಿದ್ದೇವೆ. ಹಾಗೆಯೇ ರೋಡ್ ಟೆಕ್ನಲಾಜಿಯಲ್ಲಿ ಕಾಂಕ್ರೀಟ್‍ಗೆ  ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಇವೆಲ್ಲದಕ್ಕೂ ಬೈ ಪ್ಯಾಕ್ ಸಿಸ್ಟಮ್ ಮೂಲಕ  ಪಾಸ್ಟಿಕ್ ಬಳಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಪ್ಲಾಸ್ಟಿಕ್ ಲೇಪಿತ ವಸ್ತುಗಳನ್ನು ಉಪಯೋಗಿಸುವುದರಿಂದ ಆರೋಗ್ಯಕ್ಕೆ  ಮಾರಾಕವಾಗುವಂತಹ ಕಾಯಿಲೆಗಳು ಸಂಭವಿಸುತ್ತದೆ. ಇದಕ್ಕೆ ಪರ್ಯಾಯ ಬ್ಯಾಗ್ ವ್ಯವಸ್ಥೆಯನ್ನು ಕೂಡ ಮಾಡಿಕೊಡಲಾಗುತ್ತದೆ.  ಈ ಆಂದೋಲನಕ್ಕೆ ಸಾರ್ವಜನಿಕರ ಸಹಕಾರ ಸಂಪೂರ್ಣವಾಗಿಬೇಕಾಗಿದೆ ಎಂದು ಅವರು ಮನವಿ ಮಾಡಿದರು.

ನಗರಸಭೆ ಆಯುಕ್ತ ಲೋಕೆಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ನರಸಿಂಹಮೂರ್ತಿ ಹಾಗು ಇತರರು ಅಭಿಯಾನದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News