ಮೂವರು ಅಂತರಾಜ್ಯ ದರೋಡೆಕೋರರ ಬಂಧನ: 17.59 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ

Update: 2019-08-23 18:21 GMT

ದಾವಣಗೆರೆ, ಆ.23: ರಾಷ್ಟ್ರೀಯ ಹೆದ್ದಾರಿ ಪಕ್ಕದ ಒಂಟಿ ಮನೆಗಳನ್ನೇ ಗುರಿಯಾಗಿಸಿಕೊಂಡು ಕೊಲೆ ದರೋಡೆ ಮಾಡುತ್ತಿದ್ದ ಅಂತರ್ ರಾಜ್ಯ ಪಾರ್ದಿ ಗ್ಯಾಂಗ್‍ನ ಮೂವರು ದರೋಡೆ ಕೋರರನ್ನು ಬಂಧಿಸುವಲ್ಲಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ರಾಜ್ಯದ ಉಸ್ಮಾನಬಾದ್ ಜಿಲ್ಲೆಯ ಕಲಂಬ ತಾಲೂಕಿನ ಕೊಠಲ್‍ವಾಡಿ ಗ್ರಾಮದ ಮೋಹನ ರಾಮದೇವ ಕಾಳೆ, ಅಂದೋರಾ ಗ್ರಾಮದ ದಶರಥ ಗಣಪತಿ ಕಾಳೆ ಅಲಿಯಾಸ್ ಖಂಡು ಹಾಗೂ ಕೊಠಲ್‍ವಾಡಿ ಗ್ರಾಮದ ಲಕ್ಕನ ಕಾಳೆ ಬಂಧಿತ ಆರೋಪಿಗಳು ಎಂದು ಹೇಳಿದರು.

ಕೆಲ ದಿನಗಳ ಹಿಂದೆ ದಾವಣಗೆರೆಯ ಶಾಮನೂರು ಡಾಲರ್ಸ್ ಕಾಲೋನಿ ತಿಮ್ಮರೆಡ್ಡಿ ಶಾಲೆ ಬಳಿಯ ಚಂದ್ರಕಲಾ ಎಂಬುವರ ಮನೆಗೆ ಐವರು ಅಪರಿಚಿತರು ರಾತ್ರಿ ವೇಳೆ ನುಗ್ಗಿ ಮನೆಯಲ್ಲಿದ್ದವರನ್ನು ಬಟ್ಟೆಯಿಂದ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಕೃತ್ಯವನ್ನು ಒಟ್ಟು ಏಳು ಜನರ ತಂಡದೊಂದಿಗೆ ಲಾರಿಯಲ್ಲಿ ಬಂದು ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಆರೋಪಿತರು ರಾಜ್ಯ ಮತ್ತು ಆಂದ್ರಪ್ರದೇಶ ರಾಜ್ಯದಲ್ಲಿಯೂ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಾಗೇಪಲ್ಲಿಯಲ್ಲಿ ದರೋಡೆ ಮಾಡುವಾಗ ಒಬ್ಬ ಪುರುಷನನ್ನು ಹತ್ಯೆ ಮಾಡಿರುವುದಾಗಿ ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾರೆಂದು ಮಾಹಿತಿ ನೀಡಿದರು.

ಬಂಧಿತರಿಂದ 7,59,000 ರೂ. ಬೆಲೆ ಬಾಳುವ 253 ಗ್ರಾಂ ತೂಕದ ಬಂಗಾರದ ಆಭರಣಗಳ, ಕೃತ್ಯಕ್ಕೆ ಬಳಸಿದ್ದ ವಸ್ತುಗಳು ಹಾಗೂ 10 ಲಕ್ಷ ರೂ. ಬೆಲೆ ಬಾಳುವ ಒಂದು ಲಾರಿ ಸೇರಿ ಒಟ್ಟು 17,59,000 ರೂ ಬೆಲೆ ಬಾಳುವ ಮಾಲನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಉಳಿದ ನಾಲ್ವರ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದರು.

ಈ ಡಕಾಯತಿ ತಂಡವು ವಿದ್ಯಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ದರೋಡೆ ಮತ್ತು ಒಂದು ಮನೆ ಕಳವು, ಕಲಬುರಗಿ ಜಿಲ್ಲೆಯ ಜೇವರ್ಗಿ ಠಾಣೆ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣ, ಆಂಧ್ರ ಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ತ್ರೀಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ, ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ದರೋಡೆ ಪ್ರಕರಣ ಹಾಗೂ ಬಾಗೇಪಲ್ಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ಕೊಲೆ ಮತ್ತು ದರೋಡೆ ಮಾಡಿರುವ ಬಗ್ಗೆ ಬಂಧಿತರು ಸುಳಿವು ನೀಡಿದ್ದಾರೆ ಎಂದು ವಿವರಿಸಿದರು.

ಎಎಸ್ಪಿ ರಾಜೀವ್, ಡಿವೈಎಸ್‍ಪಿಗಳಾದ ನಾಗರಾಜ, ಎಂ.ಕೆ ಗಂಗಲ್, ಡಾ.ದೇವರಾಜ್ ಇವರ ಮಾರ್ಗದರ್ಶನದಲ್ಲಿ ಸಿಪಿಐಗಳಾದ ತಿಮ್ಮಣ್ಣ, ಲಕ್ಷ್ಮಣ್ ನಾಯ್ಕ, ದೇವರಾಜ್, ಪಿ.ಎಸ್.ಐಗಳಾದ ಪ್ರಸಾದ್, ರೂಪ ತೆಂಬದ್, ಎಎಸ್‍ಐ ಆಂಜನಪ್ಪ ಹಾಗೂ  ಸಿಬ್ಬಂದಿಗಳಾದ ಮಜೀದ್ ಕೆ.ಸಿ, ಆಂಜನೇಯ, ರಾಘವೇಂದ್ರ, ರಮೇಶ್ ನಾಯ್ಕ, ತಿಪ್ಪೇಸ್ವಾಮಿ ಕೆ.ಎಲ್, ಲೋಕಾನಾಯ್ಕ, ಚಂದ್ರಪ್ಪ, ವಿಶ್ವನಾಥ, ಮಂಜುನಾಥ, ತಿಮ್ಮಣ್ಣ, ಯೋಗೀಶ್ ನಾಯ್ಕ, ಬಸವರಾಜ್, ಕಣ್ಣಪ್ಪ, ಮಂಜುನಾಥ, ನಾಗರಾಜ, ಗೋಪಿನಾಥ ಬಿ ನಾಯ್ಕ, ನರೇಂದ್ರ ಹಾಗೂ ಗಣಕಯಂತ್ರ ವಿಭಾಗದ ಸಿಬ್ಬಂದಿಗಳಾದ ರಾಘವೇಂದ್ರ, ಶಾಂತ ರಾಜ್, ಉಮೇಶ್, ಚಾಲಕರಾದ ಮಂಜುನಾಥ, ರಾಮಚಂದ್ರ, ಉಮೇಶ್ ನಾಯ್ಕ ಕಾರ್ಯಚರಣೆ ನಡೆಸಿದ್ದು, ಇವರಿಗೆ ಮಹರಾಷ್ಟ್ರ ಉಸ್ಮಾನಾಬಾದ್ ಜಿಲ್ಲೆಯ ಎಲ್.ಸಿ.ಬಿ ಘಟಕದ ಪಿ.ಐ ಹರ್ಷವರ್ಧನ ಗೌಳಿ ಮತ್ತು ಪಿ.ಐ ಸಂದೀಪ್ ಮೋದಿ, ಪಿ.ಎಸ್.ಐ ಕರಣ್ ಮಾನೆ ಸಿಬ್ಬಂದಿಗಳಾದ ವಾಘ್ಮೋರೆ, ಅಮೂಲ್ ಚೌಹಣ್, ಜೋಂಬಾಡೆ ಮತ್ತು ವಿದ್ಯಾನಗರ ಠಾಣೆಯ ಸಿಬ್ಬಂದಿಗಳು ತನಿಖೆಗೆ ಸಹಕರಿಸಿದ್ದಾರೆಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News