'ತ್ರಿವಳಿ ತಲಾಕ್ ನಿಷೇಧ' ಪ್ರಶ್ನಿಸಿ ಸುಪ್ರೀಂಗೆ ರಿಟ್ ಅರ್ಜಿ ಸಲ್ಲಿಕೆ: ಮೌಲಾನ ತನ್ವೀರ್ ಹಾಶ್ಮಿ

Update: 2019-08-24 12:47 GMT

ಬೆಂಗಳೂರು, ಆ.24: ಕೇಂದ್ರ ಸರಕಾರವು ತ್ರಿವಳಿ ತಲಾಕ್ ನಿಷೇಧಕ್ಕೆ ಸಂಬಂಧಿಸಿದಂತೆ ರೂಪಿಸಿರುವ ಕಾನೂನನ್ನು ಪ್ರಶ್ನಿಸಿ ರಾಜ್ಯದ ಎಲ್ಲ ಮುಸ್ಲಿಮರ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ಜಮಾತೆ ಅಹ್ಲೆ ಸುನ್ನತ್ ಕರ್ನಾಟಕ ಸಂಘಟನೆಯ ಅಧ್ಯಕ್ಷ ಮೌಲಾನ ಸಯ್ಯದ್ ತನ್ವೀರ್ ಪೀರಾಂ ಹಾಶ್ಮಿ ತಿಳಿಸಿದರು.

ಶನಿವಾರ ಇಲ್ಲಿನ ಆರ್.ಟಿ.ನಗರದಲ್ಲಿರುವ ಸಂಘಟನೆಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ರೂಪಿಸಿರುವ ಈ ಕಾನೂನು ಸ್ವೀಕಾರ್ಹವಲ್ಲ. ಸಾಕಷ್ಟು ಲೋಪಗಳಿರುವ ಈ ಕಾನೂನು, ಸಂಸತ್ತಿನಲ್ಲಿ ಗಂಭೀರವಾಗಿ ಚರ್ಚೆಯಾಗದೆ ಅಂಗೀಕರಿಸಲ್ಪಟ್ಟಿರುವುದು ಸರಿಯಲ್ಲ ಎಂದರು.

ತ್ರಿವಳಿ ತಲಾಕ್ ನಿಷೇಧ ಕಾನೂನಿನಲ್ಲಿರುವ ಲೋಪಗಳನ್ನು ಸರಿಪಡಿಸುವಂತೆ ಕೋರಿ ನಮ್ಮ ಸಂಘಟನೆ ವತಿಯಿಂದ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಹೊಸದಿಲ್ಲಿಯ ಹಿರಿಯ ವಕೀಲ ಶಕೀಲ್ ಅಹ್ಮದ್ ಸಯ್ಯದ್‌ರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಲು ನೇಮಕ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಒಬ್ಬ ವ್ಯಕ್ತಿಗೆ ಏಕಕಾಲಕ್ಕೆ ಮೂರು ಬಾರಿ ತಲಾಕ್ ನೀಡಿದರೆ ಅದು ಕಾನೂನು ಬಾಹಿರವಾಗುತ್ತದೆ. ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ, ಮದುವೆ ರದ್ದಾಗುವುದಿಲ್ಲ ಎಂದು ಕಾನೂನು ಹೇಳುತ್ತಿದೆ. ಮದುವೆ ರದ್ದಾಗದಿದ್ದರೆ ಯಾವ ಕಾರಣಕ್ಕಾಗಿ ಶಿಕ್ಷೆ ವಿಧಿಸಲಾಗುತ್ತದೆ. ಒಂದು ವೇಳೆ ಆ ವ್ಯಕ್ತಿ ಜೈಲು ಪಾಲಾದರೆ ಪತ್ನಿ ಹಾಗೂ ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಳ್ಳುವವರು ಯಾರು? ಎಂದು ತನ್ವೀರ್ ಹಾಶ್ಮಿ ಪ್ರಶ್ನಿಸಿದರು.

ಮೂರು ವರ್ಷಗಳ ಬಳಿಕ, ಆ ವ್ಯಕ್ತಿ ಜೈಲಿನಿಂದ ಹೊರಗೆ ಬಂದ ಬಳಿಕ ತನ್ನ ಪತ್ನಿಯನ್ನು ಸ್ವೀಕರಿಸುತ್ತಾನೆಯೇ? ಈ ರೀತಿಯ ಕಾನೂನುಗಳಿಂದ ಸಮಾಜದಲ್ಲಿ ತಲಾಕ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದರಿಂದ ಉಂಟಾಗುವ ಸಮಸ್ಯೆಗಳಿಗಿಂತ, ಹೆಚ್ಚಿನ ಸಮಸ್ಯೆಗಳು ಉಂಟಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತ್ರಿವಳಿ ತಲಾಕ್ ಕಾನೂನು ಕುರಿತು ಹಲವಾರು ಸಂಘಟನೆಗಳು ಸಲ್ಲಿಸಿರುವ ಮನವಿಗಳಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿರುವುದು ಸ್ವಾಗತಾರ್ಹವಾದದ್ದು ಎಂದು ತನ್ವೀರ್ ಹಾಶ್ಮಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮೌಲಾನ ಮುಫ್ತಿ ಮುಹಮ್ಮದ್ ಅಲಿ, ಮೌಲಾನ ಮುಫ್ತಿ ನಯಾಝ್ ಆಲಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News