ಕಲಬುರಗಿ ವಿಮಾನ ನಿಲ್ದಾಣ ನಿರ್ವಹಣೆಗೆ ಪ್ರಾಧಿಕಾರದ ಜತೆ ಒಪ್ಪಂದ

Update: 2019-08-24 14:33 GMT

ಬೆಂಗಳೂರು, ಆ. 24: ಕಲಬುರಗಿ ವಿಮಾನ ನಿಲ್ದಾಣ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ವಿಮಾನಯಾನ ಪ್ರಾಧಿಕಾರಕ್ಕೆ ವಹಿಸಲು ಸರಕಾರದ ಪರವಾಗಿ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಹಾಗೂ ಭಾರತೀಯ ವಿಮಾನಯಾನ ಪ್ರಾಧಿಕಾರದ ಜತೆ ಒಪ್ಪಂದ ಮಾಡಿಕೊಳ್ಳಲಾಯಿತು.

ಶನಿವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಕಾರ್ಯದರ್ಶಿ ಕಪಿಲ್ ಮೋಹನ್ ಹಾಗೂ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು. ಈ ವೇಳೆ ಸಂಸದ ಸಂಸದ ಡಾ.ಉಮೇಶ್ ಜಾಧವ್, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಅವಿನಾಶ ಜಾಧವ್ ಸೇರಿ ಅಧಿಕಾರಿಗಳು ಉಪಸ್ಥಿತರಿದ್ದರು.

2007ರಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿ, ಉದ್ದೇಶಿತ ಯೋಜನೆಗೆ 742 ಎಕರೆ ಭೂಮಿ ಹಾಗೂ 22 ಕೋಟಿ ರೂ.ಗಳು ಭೂಸ್ವಾಧೀನ ಮತ್ತು 208 ಕೋಟಿ ರೂ.ನಿರ್ಮಾಣಗಳನ್ನು ಒದಗಿಸಲಾಗಿತ್ತು. 2018ರ ಆಗಸ್ಟ್‌ನಲ್ಲೆ ಪ್ರಾಯೋಗಿಕ ವಿಮಾನ ಹಾರಾಟವನ್ನು ನಡೆಸಲಾಗಿತ್ತು.

ಇದೇ ವೇಳೆ ಮಾತನಾಡಿದ ಸಂಸದ ಉಮೇಶ್ ಜಾಧವ್, ಹಿಂದುಳಿದ ಪ್ರದೇಶವಾದ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ದೇಶದ ಹಾಗೂ ರಾಜ್ಯದ ರಾಜಧಾನಿಯೊಂದಿಗೆ ವಿಮಾನಯಾನ ಸಂಪರ್ಕವನ್ನು ಕಲ್ಪಿಸುವುದಕ್ಕೆ ಅನುಕೂಲ ಆಗಲಿದೆ. ಅಲ್ಲದೆ ಹೈ.ಕ. ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದರು.

ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ಮೋದಿ, ನಾಗರಿಕ ವಿಮಾನಯಾನ ಖಾತೆ ಸಚಿವ ಹರದೀಪ್ ಪುರಿ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖುದ್ದು ಆಹ್ವಾನಿಸಿದ್ದು, ಸೆಪ್ಟೆಂಬರ್ 17ರಂದು ವಿಮೋಚನಾ ದಿನಾಚರಣೆಯಂದೇ ವಿಮಾನ ನಿಲ್ದಾಣ ಉದ್ಘಾಟನೆ ಆಗುವ ಸಾಧ್ಯತೆಗಳಿದ್ದು, ಈ ಭಾಗದ ಜನರ ಬಹುದಿನ ಕನಸು ನನಸಾಗಲಿದೆ ಎಂದು ಅವರು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News