×
Ad

ನೆರೆ ಪರಿಹಾರಕ್ಕಾಗಿ ಆ.26ಕ್ಕೆ ಎಲ್ಲಾ ಜಿಲ್ಲಾ ಕಚೇರಿಗಳ ಮುಂದೆ ಪ್ರತಿಭಟನೆ: ರೈತ ಸಂಘ

Update: 2019-08-24 20:09 IST

ಬೆಂಗಳೂರು, ಆ.24: ಕೇಂದ್ರ ಸರಕಾರ ಒಂದು ಲಕ್ಷ ಕೋಟಿ ರೂ. ನೆರೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಆ.26ರಂದು ಬೆಳಗ್ಗೆ 10.30ಕ್ಕೆ ರಾಜ್ಯದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಕರೆ ನೀಡಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯದಲ್ಲಿನ ನೆರೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. 4,394 ಹಳ್ಳಿಗಳು ಜಲಪ್ರಳಯಕ್ಕೆ ತುತ್ತಾಗಿದ್ದು, ಒಂದು ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿದೆ. ಆದರೆ, ಕೇಂದ್ರ ಸರಕಾರ ಈವರೆಗೂ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಕಳೆದ ವರ್ಷದ ಪರಿಹಾರ ಈ ವರ್ಷ ಬಿಡುಗಡೆ ಮಾಡಿದ್ದು, ಪ್ರಸಕ್ತ ವರ್ಷದ ಪರಿಹಾರ ಮುಂದಿನ ವರ್ಷ ಬಿಡುಗಡೆ ಮಾಡುತ್ತದೆಯೇ? ಕೇರಳ ಮತ್ತು ತಮಿಳುನಾಡಿಗೆ ಸಾವಿರಾರು ಕೋಟಿ ರೂ. ನೀಡುವ ಸರಕಾರ ರಾಜ್ಯಕ್ಕೆ ಹಣ ನೀಡದೇ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಬೆಳೆ ಮತ್ತು ಆಸ್ತಿ ನಷ್ಟದ ಬಗ್ಗೆ ವೈಜ್ಞಾನಿಕವಾಗಿ ಲೆಕ್ಕ ಹಾಕಿ ಸಹಾಯಹಸ್ತ ನೀಡುವುದು ಸರಕಾರದ ಆದ್ಯ ಕರ್ತವ್ಯ. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 40 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ. 10 ಸಾವಿರ ಕೋಟಿ ರೂ. ಪರಿಹಾರವನ್ನು ಕೇಂದ್ರ ಸರಕಾರ ನೀಡುವ ನಿರೀಕ್ಷೆ ಇದೆ. ಪ್ರಸ್ತುತ ಮೂರು ಸಾವಿರ ಕೋಟಿ ರೂ. ನೀಡಬೇಕು ಎನ್ನುತ್ತಾರೆ. ಈ ಹಣದಲ್ಲಿ ಪರಿಹಾರ ಸಾಧ್ಯವೇ ಎಂದು ಪ್ರಶ್ನಿಸಿದರು.

ಅತಿವೃಷ್ಟಿಯಿಂದ ಹದಿನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದ್ದು, ರೈತರು ಬೀದಿಗೆ ಬಂದಿದ್ದಾರೆ. ಆದರೂ, ರಾಜ್ಯ ಮತ್ತು ಕೇಂದ್ರ ಸರಕಾರ ಕಣ್ಣುಮುಚ್ಚಿ ಕುಳಿತುಕೊಂಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ರಚನೆ ಮತ್ತು ಖಾತೆ ಹಂಚಿಕೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಜನರ ಸಮಸ್ಯೆಗೆ ಸರಕಾರ ಧ್ವನಿಯಾಗಬೇಕಿದೆ ಎಂದು ಒತ್ತಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News