"ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ..." : ಜೇಟ್ಲಿಗೆ ಸಂತಾಪ ಸೂಚಿಸಿದ ಪೋಸ್ಟ್ ನಲ್ಲಿ ಬಿಎಸ್‌ವೈ ಪುತ್ರ ಎಡವಟ್ಟು

Update: 2019-08-24 15:24 GMT

ಬೆಂಗಳೂರು, ಆ. 24: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಮುಖ್ಯಮಂತ್ರಿ ಸೇರಿ ಅನೇಕ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದು, ಈ ಪೈಕಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ತನ್ನ ಫೇಸ್ಬುಕ್ ಖಾತೆಯಲ್ಲಿ ಜೇಟ್ಲಿಗೆ ಸಂತಾಪ ಸೂಚಿಸಿ ಹಾಕಿದ ಪೋಸ್ಟ್ ನಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

'ಶ್ರೀ ಅರುಣ್ ಜೇಟ್ಲಿ ಇನ್ನಿಲ್ಲ.. ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರು, ಶ್ರೇಷ್ಠ ಸಂಸದೀಯ ಪಟು, ಅದ್ಭುತ ವಾಗ್ಮಿ, ಮಾಜಿ ಕೇಂದ್ರ ಸಚಿವ ಶ್ರೀ ಅರುಣ್ ಜೇಟ್ಲಿಯವರ ನಿಧನದಿಂದ ದೇಶಕ್ಕೆ, ಪಕ್ಷಕ್ಕೆ ಮತ್ತು ವೈಯಕ್ತಿಕವಾಗಿ ನನಗೂ ಕೂಡ ಅನಾಥಪ್ರಜ್ಞೆ ಕಾಡುತ್ತಿದೆ ಎಂದು ಸಂತಾಪ ಸೂಚಿಸಿರುವ ವಿಜಯೇಂದ್ರ, "ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಅವರು (ಜೇಟ್ಲಿ) ಕರ್ನಾಟಕದ ಉಸ್ತುವಾರಿಯಾಗಿದ್ದರು" ಎಂದು ತನ್ನ ಪೋಸ್ಟ್ ನಲ್ಲಿ ಬರೆದು ಎಡವಟ್ಟು ಮಾಡಿಕೊಂಡಿದ್ದಾರೆ. 

ದೇಶ ಒಬ್ಬ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದೆ. ದೇವರು ಜೇಟ್ಲಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಆ ಎತ್ತರದ ವ್ಯಕ್ತಿತ್ವದ ರಾಜನೀತಿಜ್ಞರಿಗೆ ನನ್ನ ಗೌರವಪೂರ್ವಕ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಿದ್ದೇನೆ. ದೇವರು ಅವರ ಕುಟುಂಬದವರು ಮತ್ತು ಅಪಾರ ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅನೇಕ ದಶಕಗಳಿಂದ ಜೇಟ್ಲಿಯವರೊಂದಿಗೆ ನನ್ನ ಒಡನಾಟ ಇನ್ನು ನೆನಪು ಮಾತ್ರ. ಎಲ್ಲ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ವಿದ್ವತ್ತು ಅವರಲ್ಲಿತ್ತು. ಏಕರೂಪ ತೆರಿಗೆ ಸೇರಿದಂತೆ ನಮ್ಮ ದೇಶದ ಆರ್ಥಿಕ ಸುಧಾರಣೆಯಲ್ಲಿ ಅವರ ಪಾತ್ರ ದೇಶ ಎಂದಿಗೂ ಮರೆಯುವುದಿಲ್ಲ. ಜೇಟ್ಲಿಯವರ ಸಮರ್ಥ ನಿರ್ವಹಣೆಯಲ್ಲಿ ಭಾರತ 2 ಟ್ರಿಲಿಯನ್ ಡಾಲರ್ ಆರ್ಥಿಕ ದೈತ್ಯಶಕ್ತಿಯಾಗಿ ಬೆಳೆಯಿತು.

ಅವರು ಉದಾರವಾದಿಯಾಗಿದ್ದರು, ರಾಷ್ಟ್ರವಾದಿಯಾಗಿದ್ದರು, ಅತ್ಯುತ್ತಮ ನ್ಯಾಯವಾದಿಗಳಾಗಿದ್ದಂತೆ ಆರ್ಥಿಕ ತಜ್ಞರೂ ಆಗಿದ್ದರು. ಎಲ್ಲ ಪಕ್ಷಗಳ ನಾಯಕರು ಜೇಟ್ಲಿಯವರನ್ನು ಗೌರವಿಸುತ್ತಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲೂ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಜೇಟ್ಲಿಯವರು ನರೇಂದ್ರ ಮೋದಿಯವರು ಹೇಳಿದಂತೆ ಅಮೂಲ್ಯ ವಜ್ರ ಸದೃಶರಾಗಿದ್ದರು ಅಂತಹ ಅದ್ವಿತೀಯ ನಾಯಕರಾಗಿದ್ದ ಜೇಟ್ಲಿಯವರು ಇಷ್ಟು ಬೇಗ ನಮ್ಮನ್ನು ಅಗಲಿರುವುದು ಎಂದಿಗೂ ತುಂಬಲಾರದ ನಷ್ಟವಾಗಿದೆ. ಅವರಿಲ್ಲದ ದೊಡ್ಡ ಶೂನ್ಯತೆ ನಮ್ಮ ಪಕ್ಷವನ್ನು ಆವರಿಸಿದೆ. ಮತ್ತೊಮ್ಮೆ ನನ್ನ ಆತ್ಮೀಯ ಮಾರ್ಗದರ್ಶಕರಾಗಿದ್ದ ಜೇಟ್ಲಿಯವರಿಗೆ ನನ್ನ ಅಶ್ರುಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಿದ್ದೇನೆ. ಓಂ ಶಾಂತಿ!’ ಎಂದು ಬರೆದುಕೊಂಡಿದ್ದ ವಿಜಯೇಂದ್ರ ಯಡಿಯೂರಪ್ಪ ಆ ಬಳಿಕ ತಮ್ಮ ಪೋಸ್ಟ್ ಅನ್ನು ಅಳಿಸಿಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News