ಸಿಂಗಾಪುರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸಾವಿರಾರು ರೂ. ವಂಚನೆ: ದೂರು ದಾಖಲು

Update: 2019-08-24 18:24 GMT

ಶಿವಮೊಗ್ಗ, ಆ. 24: ಶಿವಮೊಗ್ಗ ನಗರದ ವ್ಯಕ್ತಿಯೋರ್ವರ ಮೊಬೈಲ್‍ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ, ಸಿಂಗಾಪುರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸಾವಿರಾರು ರೂ. ಮೋಸ ಮಾಡಿರುವ ಘಟನೆ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗೋಪಾಳದ ಮಿಳಘಟ್ಟದ ಬಸವೇಶ್ವರ ದೇವಸ್ಥಾನದ ಹತ್ತಿರದ ನಿವಾಸಿ ಸುರೇಶ್ ವಂಚನೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರಿಗೆ ಪಂಜಾಬ್ ಎಂಪ್ಲಾಯ್‍ಮೆಂಟ್ ಏಜೆನ್ಸಿಯ ಏಜೆಂಟ್ ಎಂದು ಹೇಳಿ ಅಪರಿಚಿತ ವ್ಯಕ್ತಿಯೋರ್ವರು ಕರೆ ಮಾಡಿದ್ದರು. ಇವರಿಂದ ಆಧಾರ್, ಪಾಸ್‍ಪೋರ್ಟ್, ಪೋಟೋವನ್ನು ಪಡೆದುಕೊಂಡಿದ್ದರು.

ವೈದ್ಯಕೀಯ ಚಿಕಿತ್ಸೆ ವೆಚ್ಚವೆಂದು 15 ಸಾವಿರ ರೂ. ಕಟ್ಟಿಸಿಕೊಂಡಿದ್ದರು. ತದನಂತರ ವೀಸಾ ಬಂದಿದೆ ಎಂದು ಹೇಳಿ ಕರೆ ಮಾಡಿದ್ದ ವಂಚಕ ವಿಸಾ ವೆಚ್ಚ, ವಿಮಾನದ ಟಿಕೆಟ್ ಖರೀದಿ ಇತ್ಯಾದಿ ವೆಚ್ಚಗಳೆಂದು ವಿವಿಧ ಬ್ಯಾಂಕ್ ಖಾತೆಗಳಿಗೆ 44,500 ರೂ. ಹಣವನ್ನು ಪಡೆದುಕೊಂಡಿದ್ದ. ನಂತರ ಮೊಬೈಲ್ ನಂಬರ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ವಂಚನೆಗೊಳಗಾಗಿದ್ದು ಗೊತ್ತಾಗುತ್ತಿದ್ದಂತೆ ಸುರೇಶ್‍ರವರು ಸಿಇಎನ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News