ಅಮೆರಿಕದ ಮೂಲದ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದ ಇರಾನ್

Update: 2019-08-25 17:19 GMT

ಟೆಹರಾನ್,ಆ.25: ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ಆರ್ಥಿಕ ಭಯೋತ್ಪಾದನೆ ನಡೆಸಿದೆ ಎಂದು ಆರೋಪಿಸಿ ಅಮೆರಿಕ ಮೂಲದ ಸಂಸ್ಥೆ ಫೌಂಡೇಶನ್ ಫೋರ್ ಡಿಫೆನ್ಸ್ ಆಫ್ ಡೆಮಾಕ್ರಸಿಸ್ (ಎಫ್‌ಡಿಡಿ) ಮತ್ತು ಅದರ ಮುಖ್ಯಸ್ಥ ಮಾರ್ಕ್ ಡುಬೊವಿಟ್ಸ್ ಅವರನ್ನು ಇರಾನ್ ಕಪ್ಪುಪಟ್ಟಿಗೆ ಸೇರಿಸಿದೆ.

ಈ ಕುರಿತು ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ನೀಡಿರುವ ಹೇಳಿಕೆಯಲ್ಲಿ, ಆಪಾದಿತ ಸಂಸ್ಥೆ ಮತ್ತು ಅದರ ನಿರ್ದೇಶಕ ಇರಾನ್ ವಿರುದ್ಧ ಆರ್ಥಿಕ ಭಯೋತ್ಪಾದನೆಯನ್ನು ವಿನ್ಯಾಸಗೊಳಿಸಿದ, ಹೇರಿದ ಮತ್ತು ಪರಿಣಾಮವನ್ನು ತೀವ್ರಗೊಳಿಸಿದ ಆರೋಪ ಹೊಂದಿದ್ದಾರೆ. ಹಾಗಾಗಿ ಸಂಸ್ಥೆ ಮತ್ತು ನಿರ್ದೇಶಕ ಮಾರ್ಕ್ ಡುಬೊವಿಟ್ಸ್ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದೆ.

ಇರಾನ್‌ನ ಜನರ ಭದ್ರತೆ ಮತ್ತು ಪ್ರಮುಖ ಹಿತಾಸಕ್ತಿಗಳಿಗೆ ಅಪಾಯವುಂಟು ಮಾಡಲು ಎಫ್‌ಡಿಡಿ ಮತ್ತು ಡೊಬೊವಿಟ್ಸ್ ಗಂಭೀರವಾಗಿ ಮತ್ತು ಸಕ್ರಿಯವಾಗಿ ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಎಫ್‌ಡಿಡಿ ತನ್ನ ವಾಶಿಂಗ್ಟನ್ ಮೂಲದ, ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ನೀತಿಗಳ ಮೇಲೆ ಗಮನಹರಿಸುವ ಪಕ್ಷಾತೀತ ಸಂಶೋಧನಾ ಸಂಸ್ಥೆ ಎಂದು ಹೇಳಿಕೊಂಡಿದೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮಕ್ಕೆ ಮಿತಿ ಹೇರುವುದರ ಬದಲಿಗೆ ಅದರ ವಿರುದ್ಧದ ನಿರ್ಬಂಧವನ್ನು ತೆಗೆಯಲು ಜಾಗತಿಕ ಶಕ್ತಿಗಳು ಒಪ್ಪಿ 2015ರಲ್ಲಿ ನಡೆಸಿದ ಒಪ್ಪಂದಕ್ಕೆ ಈ ಸಂಸ್ಥೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News