ಮೋದಿಯ ತಪ್ಪು ನಿರ್ಧಾರಗಳಿಗೆ ಶಿಲುಬೆಯೇರಿದ್ದ ಅರುಣ್ ಜೇಟ್ಲಿ

Update: 2019-08-26 10:43 GMT

ಅರುಣ್ ಜೇಟ್ಲಿ ನಿಧನರಾಗುವ ಮೂಲಕ, ಮೋದಿ ನೇತೃತ್ವದ ಹೊಸ ಬಿಜೆಪಿ ಬಹಳಷ್ಟು ಕಳೆದುಕೊಂಡಿದೆ. ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಉಗ್ರ ಬಲಪಂಥೀಯ ಸ್ವರೂಪವನ್ನು ಪಡೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿಯ ಸಜ್ಜನಿಕೆಯ ಮುಖವಾಗಿ ಬಳಕೆಯಾದವರು ಅರುಣ್ ಜೇಟ್ಲಿ. ಬಿಜೆಪಿಯೊಳಗಿನ ಬಹುತೇಕ ನಾಯಕರು ಹಿಂದುತ್ವದ ದ್ವೇಷ ರಾಜಕಾರಣದ ಮೂಲಕ ಬೆಳೆದವರಾದರೆ ಜೇಟ್ಲಿ ಅದಕ್ಕೆ ಹೊರತಾದ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ‘ನಿಮ್ಮಿಳಗಿದ್ದೂ ನಿಮ್ಮಂತಾಗದೆ’ ಕವಿತೆಯಂತೆ, ಜನಸಂಘದ ನಡುವೆಯಿದ್ದೂ ಅವರಂತಾಗದೆ, ತನ್ನದೇ ವ್ಯಕ್ತಿತ್ವ, ಅರಿವು, ತಿಳುವಳಿಕೆಯ ಮೂಲಕ ಬೆಳೆದವರು. ವಿದ್ವಾಂಸ, ತಜ್ಞ ಎಂದು ಬಿಜೆಪಿಯೊಳಗೆ ಗುರುತಿಸಬಹುದಾದ ಬೆರಳೆಣಿಕೆಯ ಹೆಸರುಗಳಲ್ಲಿ ಜೇಟ್ಲಿಯವರದ್ದೂ ಒಂದು. ಕ್ರೈಸ್ತ ಮಿಶನರಿ ಶಾಲೆಯಲ್ಲಿ ಶಿಕ್ಷಣ ಪಡೆದ ಈ ನ್ಯಾಯವಾದಿ, ಸಚಿವರಾಗಿದ್ದಾಗ ತನ್ನ ಖಾಸಗಿ ಕಚೇರಿಯಲ್ಲಿ ದೇವ ದೇವತೆಯರ ಭಾವಚಿತ್ರಗಳನ್ನು ಇಡದೆ ಕಾನೂನು ಪ್ರಮಾಣಪತ್ರಗಳು ಮತ್ತು ಕ್ರಿಕೆಟ್ ಸಂಘದ ಸ್ಮರಣಿಕೆಗಳಿಂದ ಕಚೇರಿಯನ್ನು ಅಲಂಕರಿಸಿದವರು. ಮಾರ್ಕ್ಸ್ ವಾದ, ಎಡಪಂಥೀಯ ರಾಜಕೀಯದ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ್ದರೂ, ಅದನ್ನು ಸಂಪೂರ್ಣ ತಿರಸ್ಕರಿಸುವ ವಿಷಯ ಎಂದು ಭಾವಿಸಿದವರಲ್ಲ. ‘ನಕ್ಸಲ್ ಚಳವಳಿ’ಯನ್ನೂ ರಾಕ್ಷಸೀಕರಿಸುವುದನ್ನು ಬೆಂಬಲಿಸುವುದಿಲ್ಲ ಎಂದು ಒಂದೊಮ್ಮೆ ಅವರು ಸ್ಪಷ್ಟಪಡಿಸಿದ್ದರು. ತುರ್ತುಪರಿಸ್ಥಿತಿಯ ಸಂದರ್ಭದ ಹೋರಾಟವೇ ಅವರ ರಾಜಕೀಯ ಬೆಳವಣಿಗೆಯ ಅಡಿಗಲ್ಲು. ತುರ್ತುಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಅವರ ಭಾಗವಹಿಸುವಿಕೆ ಒಂದು ಆಕಸ್ಮಿಕ ಮತ್ತು ಅವರ ಬಂಧನವೂ ಕೂಡ. ಆ ಸಂದರ್ಭದಲ್ಲಿ 19 ತಿಂಗಳುಗಳನ್ನು ಅಂಬಾಲ ಮತ್ತು ತಿಹಾರ್ ಜೈಲಿನಲ್ಲಿ ಕಳೆದಿದ್ದರು. ಬಿಡುಗಡೆಯ ಬಳಿಕದ ಒಂದು ದಶಕವನ್ನು ಅವರು ಕಾನೂನು ಶಿಕ್ಷಣಕ್ಕೆ ಮೀಸಲಿಟ್ಟರಾದರೂ, ತುರ್ತುಪರಿಸ್ಥಿತಿಯ ಆಕಸ್ಮಿಕ ಅನುಭವ ಅವರೊಳಗೊಬ್ಬ ರಾಜಕಾರಣಿಯನ್ನು ಸೃಷ್ಟಿಸಿತ್ತು. ಲಾಲು, ಶರದ್ ಯಾದವ್, ನಿತೀಶ್, ಕಾರಾಟ್, ಯೆಚೂರಿ, ಪ್ರಕಾಶ್ ಸಿಂಗ್ ಬಾದಲ್, ಜೆಪಿ, ಆಚಾರ್ಯ ಕೃಪಲಾನಿ, ಜಾರ್ಜ್ ಫೆರ್ನಾಂಡಿಸ್, ಅಡ್ವಾಣಿ, ವಾಜಪೇಯಿ, ನಾನಾಜಿ ದೇಶ್‌ಮುಖ್ ಹೀಗೆ ಬಹುತೇಕ ನಾಯಕರ ಜೊತೆ ಸಂಪರ್ಕ ಹೊಂದಲು ಈ ಸಂದರ್ಭವೇ ಅವರಿಗೆ ನೆರವಾಯಿತು. 80 ಮತ್ತು 90ರ ದಶಕದಲ್ಲಿ ಜೇಟ್ಲಿಯವರು ಪ್ರಾಮುಖ್ಯತೆಗೇರಲು ರಾಜಕೀಯದೊಂದಿಗೆ ಅವರ ಕಾನೂನು ವೃತ್ತಿಜೀವನ ಹದವಾಗಿ ಸಮ್ಮಿಳಿತಗೊಂಡಿದ್ದೇ ಮುಖ್ಯ ಕಾರಣ. ಇಂಡಿಯನ್ ಎಕ್ಸ್‌ಪ್ರೆಸ್ ಮಾಲಕ ರಾಮನಾಥ್ ಗೊಯೆಂಕಾ ಅವರ ವಕೀಲರಾಗಿ ಮತ್ತು ಜೈನ್ ಹವಾಲಾ ಹಗರಣದಲ್ಲಿ ರಾಜಕೀಯ ನಾಯಕರ ಪರ ನಡೆಸಿದ ವಕಾಲತ್ತು ಜೇಟ್ಲಿಯವರನ್ನು ಮುನ್ನೆಲೆಗೆ ತಂದು ನಿಲ್ಲಿಸಿತ್ತು. ಬಿಜೆಪಿಯೊಳಗೆ ಸಾರ್ವಜನಿಕವಾಗಿ ಚರ್ಚೆ ಮಾಡಬಲ್ಲ ವಿದ್ವಾಂಸರ ದೊಡ್ಡ ಕೊರತೆಯಿತ್ತು. ಟಿವಿ ವಾಹಿನಿಗಳು ಮುನ್ನೆಲೆಗೆ ಬಂದ ಬಳಿಕ ಬಿಜೆಪಿಗೂ ಜೇಟ್ಲಿಯಂತಹ ವಿದ್ವಾಂಸರ ಅನಿವಾರ್ಯವಿತ್ತು. ತನ್ನ ಮಾತು, ವಾದ ಸರಣಿಗಳ ಮೂಲಕ ಬಿಜೆಪಿಗೊಂದು ವರ್ಚಸ್ಸನ್ನು ನೀಡಿದ ಕಾರಣಕ್ಕಾಗಿಯೇ ಇರಬೇಕು, 1999ರಲ್ಲಿ ಅವರಿಗೆ ಸಚಿವ ಸ್ಥಾನ ದೊರೆಯಿತು. ಉಳಿದ ನಾಯಕರಂತೆ ಬೀದಿ ನಾಯಕರಾಗಿ ಅಥವಾ ಹಿಂದುತ್ವದ ಕೂಗು ಮಾರಿಯಾಗಿ ಗಳಿಸಿಕೊಂಡ ಪದವಿ ಅದಾಗಿರಲಿಲ್ಲ. ಅವರ ವಿದ್ವತ್ತಿಗೆ ಬಿಜೆಪಿ ತಾನಾಗಿಯೇ ಕೊಟ್ಟ ಕೊಡುಗೆ ಅದಾಗಿತ್ತು. ನರೇಂದ್ರ ಮೋದಿಯ ಸರಕಾರದಲ್ಲಿ ಜೇಟ್ಲಿ ಅನಿವಾರ್ಯ ಎಂದು ಬಿಂಬಿತರಾಗಿದ್ದೂ ಮತ್ತೆ ಅದೇ ವರ್ಚಸ್ಸಿನ ಕಾರಣಕ್ಕಾಗಿ. ಭಾರೀ ಬಹುಮತದೊಂದಿಗೆ ಮೋದಿ ಸರಕಾರ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಆ ಸರಕಾರ ತನ್ನೆಲ್ಲ ವಿವಾದಿತ ನಡೆಗಳಿಗೆ ಜೇಟ್ಲಿಯನ್ನೇ ಗುರಾಣಿಯಾಗಿ ಬಳಸಿಕೊಂಡಿತು. ಹಿಂದುತ್ವದ ವಿಷಯದಲ್ಲಿ ಮಂದಗಾಮಿಯಾಗಿರುವ ಜೇಟ್ಲಿಯವರು ಮೋದಿ ಸರಕಾರದಲ್ಲಿ ಮಹತ್ವದ ಸ್ಥಾನವನ್ನು ಅಲಂಕರಿಸಿದ್ದು, ಮೋದಿಯವರ ಹತ್ತಿರದ ವ್ಯಕ್ತಿಯಾಗಿ ಗುರುತಿಸಿದ್ದು ಹಲವರ ಹುಬ್ಬೇರಿಸಿತ್ತು. ಹಳೆಯ ಒಂದು ತಲೆಮಾರು ಮೋದಿ ಸರಕಾರದ ಜೊತೆ ಇದ್ದೂ ಇಲ್ಲದವರಂತೆ ಅಂತರವನ್ನು ಕಾಪಾಡಿಕೊಂಡಿದ್ದಾಗ, ಮೋದಿಯವರ ನಿರ್ಧಾರಗಳ ಜೊತೆಗೆ ಗುರುತಿಸಿಕೊಂಡವರಲ್ಲಿ ಒಬ್ಬರು ರಾಜನಾಥ್ ಸಿಂಗ್ ಆಗಿದ್ದರೆ, ಇನ್ನೊಬ್ಬರು ಅರುಣ್ ಜೇಟ್ಲಿ. ಉದಾರವಾದಿಗಳು ಮತ್ತು ಪ್ರಗತಿಪರರ ನಡುವೆ ಜೇಟ್ಲಿಯವರಿಗಿದ್ದ ಮೃದು ನಿಲುವುಗಳನ್ನು ಮೋದಿ ಸರಕಾರ ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಇದೇ ಸಂದರ್ಭದಲ್ಲಿ ಮೋದಿಯ ಅನಿವಾರ್ಯವನ್ನು ‘ಜೇಟ್ಲಿ’ ಕೂಡ ಬಳಸಿಕೊಂಡರು ಎನ್ನುವ ಆರೋಪಗಳಿವೆ. ರಕ್ಷಣಾಖಾತೆಯನ್ನು ಪಾರಿಕ್ಕರ್ ನಿಭಾಯಿಸಲಾಗದೆ ರಾಜೀನಾಮೆ ನೀಡಿ ಗೋವಾಕ್ಕೆ ವಾಪಸಾದಾಗ ಆ ಹೊಣೆ ಮತ್ತೆ ಬಿದ್ದದ್ದು ಜೇಟ್ಲಿ ಹೆಗಲಿಗೆ. ಕಾಶ್ಮೀರ ಸಮಸ್ಯೆ ಉಲ್ಬಣಗೊಳ್ಳುತ್ತಿರುವ ಆ ಸಂದರ್ಭದಲ್ಲೂ ಜೇಟ್ಲಿ ಹೊಣೆಗಾರಿಕೆಯಿಂದ ಹಿಂದೆ ಸರಿಯಲಿಲ್ಲ.

ಜೇಟ್ಲಿ ವಿತ್ತ ಸಚಿವರಾಗಿದ್ದ ಹೊತ್ತಿನಲ್ಲೇ ಇಡೀ ದೇಶದ ಅರ್ಥವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲಗೊಳಿಸುವ ‘ನೋಟು ನಿಷೇಧ’ವಾಯಿತು. ಈ ನಿರ್ಧಾರದಲ್ಲಿ ಅಂದಿನ ವಿತ್ತ ಸಚಿವರಾಗಿ ಜೇಟ್ಲಿಯ ಪಾತ್ರ ಏನೇನೂ ಇರಲಿಲ್ಲ ಎನ್ನುವುದು ದೇಶಕ್ಕೇ ಗೊತ್ತು. ಆದರೆ ಅದರ ದುಷ್ಪರಿಣಾಮಗಳಿಗೆ ವಿತ್ತ ಸಚಿವರಾಗಿ ಜೇಟ್ಲಿ ಕೂಡ ಹೊಣೆಗಾರರಾಗಬೇಕಾಯಿತು. ಅವರು ವಿತ್ತ ಸಚಿವರಾಗಿದ್ದ ಸಂದರ್ಭದಲ್ಲಿ ದೇಶದ ಆರ್ಥಿಕತೆಯ ಕುರಿತಂತೆ ಮಾತನಾಡಿದ್ದು ತೀರಾ ಕಡಿಮೆ. ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಅವರೆಂದೂ ಸರಕಾರದ ನಿಲುವುಗಳ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಲಿಲ್ಲ. ಸದಾ ನಗುಮುಖದಿಂದಲೇ ಮೋದಿ ಸರಕಾರವನ್ನು ಮುಂದಕ್ಕೆ ಕೊಂಡೊಯ್ದರು. ಆ ಹುದ್ದೆಯನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಾತಿಗಿಂತ ವೌನಕ್ಕೇ ಆದ್ಯತೆ ನೀಡಿ ಮೋದಿಯನ್ನು ಕಾಪಾಡಿದರು. ಸರಕಾರದಲ್ಲಿ ರಕ್ಷಣಾ ಸಚಿವ ಮತ್ತು ವಿತ್ತ ಸಚಿವ ಹೀಗೆ ಎರಡೆರಡು ಖಾತೆಗಳನ್ನು ವಹಿಸಿಕೊಂಡೂ ಅಲ್ಲಿ ತನ್ನ ಯಾವ ಛಾಪನ್ನು ಅವರಿಗೆ ಬಿತ್ತುವುದಕ್ಕೆ ಸಾಧ್ಯವಾಗಲಿಲ್ಲ. ಬಹುಶಃ ಆ ವಿಕ್ಷಿಪ್ತ ಕಾಲಘಟ್ಟದಲ್ಲಿ ಎರಡೂ ಖಾತೆಗಳನ್ನು ವಹಿಸಿಕೊಳ್ಳುವ ಎದೆಗಾರಿಕೆಯನ್ನು ಪ್ರದರ್ಶಿಸಿದ್ದೇ ಜೇಟ್ಲಿ ಹೆಚ್ಚುಗಾರಿಕೆಯೆನ್ನಬಹುದು. ಜಿಎಸ್‌ಟಿಯನ್ನು ಕಾನೂನಾಗಿ ಜಾರಿಗೆ ತರುವಲ್ಲಿ ಕೇಂದ್ರದ ವಿರೋಧ ಪಕ್ಷಗಳು ಮತ್ತು ರಾಜ್ಯಗಳ ವಿರೋಧಿಗಳನ್ನು ಚತುರತೆಯಿಂದ ನಿಭಾಯಿಸಿದ್ದರು. ಜಿಎಸ್‌ಟಿಯ ದೀರ್ಘ ಮತ್ತು ಆಯಾಸ ತರಿಸುವ ಸಭೆಗಳ ಅಧ್ಯಕ್ಷತೆಯನ್ನು ತಾಳ್ಮೆಯಿಂದ ನಿಭಾಯಿಸಿ ಜಿಎಸ್‌ಟಿ ಮಂಡಳಿಯಲ್ಲಿ ಸರ್ವಸಮ್ಮತದಿಂದ ನಿರ್ಧಾರ ತೆಗೆದುಕೊಳ್ಳುವ ಸಂಪ್ರದಾಯ ಮೂಡಲು ನೆರವಾದರು. ಜೇಟ್ಲಿಯವರ ವಿದ್ವತ್ತು, ವಿವೇಕ, ಸಂಯಮ, ತಾಳ್ಮೆ, ಉದಾರವಾದಿ ಧೋರಣೆ ಇವೆಲ್ಲವನ್ನೂ ಮೋದಿಯವರು ಗರಿಷ್ಠ ಮಟ್ಟದಲ್ಲಿ ದುರ್ಬಳಕೆ ಮಾಡಿಕೊಂಡರು. ತನ್ನದಲ್ಲದ ಎಲ್ಲ ಆರ್ಥಿಕ ತಪ್ಪು ನಿರ್ಧಾರಗಳಿಗೂ ನಗು ನಗುತ್ತಲೇ ಜೇಟ್ಲಿ ಶಿಲುಬೆಯೇರಿದರು. ಮೋದಿಯ ಯಶಸ್ವೀ ಸರಕಾರಕ್ಕೆ ನಿಜವಾದ ಅರ್ಥದಲ್ಲಿ ಹುತಾತ್ಮರಾದವರು ಅರುಣ್ ಜೇಟ್ಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News