ದೇವೇಗೌಡರು ನನ್ನ ಮೇಲೆ ಗೂಬೆ ಕೂರಿಸಿ, ರಾಜಕೀಯ ಲಾಭ ಪಡೆಯಲು ನೋಡಿದರು: ಸಿದ್ದರಾಮಯ್ಯ

Update: 2019-08-26 13:11 GMT

ಹುಬ್ಬಳ್ಳಿ, ಆ. 26: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷರ ಬದಲಾವಣೆ ಬಗ್ಗೆ ನನಗೇನೂ ಗೊತ್ತಿಲ್ಲ. ಕೇಂದ್ರದ ನಾಯಕರಾದ ಗುಲಾಂ ನಬಿ ಆಜಾದ್ ರಾಜ್ಯಕ್ಕೆ ಇಂದು ಬರುತ್ತಿದ್ದಾರೆ ಎಂಬುದಷ್ಟೇ ಗೊತ್ತು. ಆದರೆ, ನಾನು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಬಾದಾಮಿಗೆ ಹೋಗುತ್ತಿದ್ದೇನೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸರಕಾರ ಮೂವರು ಉಪ ಮುಖ್ಯಮಂತ್ರಿಗಳನ್ನು ಮಾಡುತ್ತಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಎಷ್ಟು ಜನ ಉಪ ಮುಖ್ಯಮಂತ್ರಿಗಳನ್ನು ಬೇಕಾದರೂ ಮಾಡಿಕೊಳ್ಳಲಿ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದರು.

ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲಿಲ್ಲ: ಮೈತ್ರಿ ಸರಕಾರ ಬೀಳಲು ನಾನೇ ಕಾರಣ ಎಂಬ ಆರೋಪದಲ್ಲಿ ಹುರುಳಿಲ್ಲ. ಎಚ್.ವಿಶ್ವನಾಥ್, ನಾರಾಯಣಗೌಡ ಹಾಗೂ ಗೋಪಾಲಯ್ಯನವರನ್ನು ಮುಂಬೈಗೆ ಕಳುಹಿಸಿದ್ದು ಯಾರು ಎಂದು ಸಿದ್ದರಾಮಯ್ಯ ಕೇಳಿದರು.

ದೇವೇಗೌಡರಿಗೆ ತಮ್ಮ ಪಕ್ಷದ ಶಾಸಕರನ್ನೇ ಹಿಡಿತದಲ್ಲಿ ಇಟ್ಟುಕೊಳ್ಳಲು ಆಗಲಿಲ್ಲ. ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹೀಗಾಗಿ, ಮೈತ್ರಿ ಸರಕಾರ ಉರುಳಿತು ಎಂದ ಅವರು, ದೇವೇಗೌಡರು ನನ್ನ ಮೇಲೆ ಗೂಬೆ ಕೂರಿಸಿ, ರಾಜಕೀಯ ಲಾಭ ಪಡೆದುಕೊಳ್ಳಲು ನೋಡಿದರು. ಅದು ಸಾಧ್ಯವಾಗಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News