ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡದಿರಲು ಕಟ್ಟುನಿಟ್ಟಿನ ಸೂಚನೆ

Update: 2019-08-26 17:50 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.26: ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಹಾಗೂ ಮನೆಗಳಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬಾರದು. ಮಾಡಿದ್ದಾದರೆ ಅವುಗಳನ್ನು ಜಲಮೂಲಗಳಲ್ಲಿ ವಿಸರ್ಜನೆಗೆ ಅವಕಾಶ ನೀಡಬಾರದು ಎಂದು ರಾಜ್ಯ ಸರಕಾರ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ರಾಜ್ಯದಲ್ಲಿ ಪಿಒಪಿ ಗಣೇಶ ಮೂರ್ತಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ, ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ಕ್ರಮ ವಹಿಸಬೇಕು. ಒಂದು ವೇಳೆ ಪ್ರತಿಷ್ಠಾಪಿಸಿದ್ದಲ್ಲಿ ಅವುಗಳನ್ನು ಕೆರೆ, ನದಿ, ಕಾಲುವೆ, ಕೊಳ, ಕಲ್ಯಾಣಿ ಸೇರಿದಂತೆ ಜಲಮೂಲಗಳಲ್ಲಿ ವಿಸರ್ಜನೆಗೆ ಅವಕಾಶ ನೀಡದಂತೆ ಎಲ್ಲ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಆದೇಶಿಸಲಾಗಿದೆ.

ಸರಕಾರದ ಆದೇಶದ ಪ್ರಕಾರ ಪಿಒಪಿ ಮೂರ್ತಿಗಳನ್ನು ವಿಸರ್ಜಿಸಲು ಮುಂದಾದರೆ ಪೊಲೀಸರು, ಅವುಗಳನ್ನು ತಡೆಯಬೇಕು ಎಂದು ಹೇಳಲಾಗಿದೆ. 2019ರಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ಅನುಸಾರ ಆದೇಶ ಹೊರಡಿಸಲಾಗಿದೆ.

ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಗಣೇಶ ಮೂರ್ತಿಗಳ ಖರೀದಿ ಜೋರಾಗಿದೆ. ಇದೇ ವೇಳೆ ಮಣ್ಣಿನ ಗಣೇಶ ಮೂರ್ತಿಗಳೇ ಎಂದು ಪರೀಕ್ಷಿಸಿ ಖರೀದಿ ಮಾಡಲು ಸೂಚಿಸಲಾಗಿದೆ. ಪಿಒಪಿ ಮೂರ್ತಿಗಳನ್ನು ಸ್ವಯಂ ಪ್ರೇರಣೆಯಿಂದಲೇ ತಿರಸ್ಕರಿಸಬೇಕು ಎಂದು ಸರಕಾರ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News