ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಅರಮನೆಯಲ್ಲಿ ಅದ್ಧೂರಿ ಸ್ವಾಗತ
ಮೈಸೂರು,ಆ.26: ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದಿರುವ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಗೆ ಅರಮನೆಯ ಆವರಣದಲ್ಲಿ ಜಿಲ್ಲಾಡಳಿತ ವತಿಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು.
ಸೋಮವಾರ ಅರಣ್ಯಭವನದಿಂದ ಹೆಜ್ಜೆ ಹಾಕಿ ಮೈಸೂರಿನ ಅರಮನೆಗೆ ಪ್ರವೇಶಿಸಿದ ಮೊದಲ ಹಂತದ 6 ಆನೆಗಳ ಗಜಪಡೆಗೆ ಅರಮನೆ ಜಯಮಾರ್ತಾಂಡ ದ್ವಾರದ ಬಳಿ ವಿಶೇಷ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅರಮನೆ ಬಳಿ ಗಜಪಡೆಗೆ ಪೂಜೆ ಸಲ್ಲಿಸಿ ಸ್ವಾಗತ ಕೋರಿದರು. ಈ ವೇಳೆ ಗಣ್ಯರು ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಸಚಿವರು. ದಸರಾ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಮಹಾರಾಜರು ನಡೆಸಿಕೊಂಡು ಬಂದಿದ್ದಾರೆ. ನಾನು ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಕರೆದು ಮಾತನಾಡಿ ಐತಿಹಾಸಿಕ ಹಿನ್ನೆಲೆಯುಳ್ಳ ದಸರಾವನ್ನು ಚೆನ್ನಾಗಿಯೇ ನಡೆಸುತ್ತೇವೆ ಎಂದರು.
ಇದಕ್ಕೂ ಮುನ್ನ ಮೈಸೂರು ಅರಣ್ಯ ಭವನದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಪೂಜೆ ಬಳಿಕ ಅರಮನೆಯತ್ತ ಹೊರಟ ಗಜಪಡೆಯನ್ನ ನೋಡಲು ಸಾರ್ವಜನಿಕರು ಮುಗಿ ಬಿದ್ದ ದೃಶ್ಯ ಕಂಡು ಬಂತು. ಅರಣ್ಯ ಭವನದಿಂದ ಬಳ್ಳಾಲ್ ವೃತ್ತ, ರಾಮಸ್ವಾಮಿ ವೃತ್ತ ಹಾಗೂ ಗನ್ ಹೌಸ್ ವೃತ್ತ ಮೂಲಕ ಸಾಗಿ ಅರಮನೆ ಜಯಮಾರ್ತಾಂಡ ದ್ವಾರವನ್ನು ಸೇರಿವೆ.
ಈ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಗಜಪಡೆಗಳಿಗೆ ಪೂಜೆ ಸಲ್ಲಿಸಲಾಯಿತು. ಶಾಸಕರಾದ ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ಮೇಯರ್ ಪುಷ್ಪಲತಾ ಜಗನ್ನಾಥ್, ಬಿಜೆಪಿ ಮುಖಂಡರಾದ ಡಾ.ಬಿ.ಹೆಚ್.ಮಂಜುನಾಥ್, ಹೆಚ್.ವಿ.ರಾಜೀವ್, ಮಹಾನಗರ ಪಾಲಿಕೆಯ ಸದಸ್ಯರು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ದಕ್ಷಿಣ ಭಾರತದಲ್ಲಿ ಹೈ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ಮೈಸೂರು ಅರಣ್ಯ ಭವನವನ್ನೂ ಹೈ ಅಲರ್ಟ್ ಮಾಡಲಾಗಿದ್ದು, ದಸರಾ ಆನೆಗಳು ಭಾರೀ ಭದ್ರತೆಯಲ್ಲಿ ಅರಮನೆಯತ್ತ ಸಾಗಿದವು. ಮೈಸೂರು ದಸರಾ ಗಜಪಡೆ ಬಳಿ ಶ್ವಾನ ಹಾಗೂ ಬಾಂಬ್ ಸ್ಕ್ವಾಡ್ ನಿಂದ ಶೋಧ ಕಾರ್ಯ ನಡೆಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಅರಣ್ಯ ಭವನದಲ್ಲಿ ಭದ್ರತಾದಳ ಹೈ ಚೆಕ್ಕಿಂಗ್ ಮಾಡಿತ್ತು .
ಶಾಸಕ ರಾಮದಾಸ್ ಗೈರು
ದಸರಾ ಮಹೋತ್ಸವದ ಗಜಪಡೆ ಸ್ವಾಗತಕ್ಕೆ ಶಾಸಕ ರಾಮದಾಸ್ ಗೈರಾಗುವ ಮೂಲಕ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಶಾಸಕ ರಾಮದಾಸ್ ಅವರಿಗೆ ಸಚಿವ ಸ್ಥಾನ ಸಿಗದಿರುವುದು ಅವರ ಬೆಂಬಲಿಗರಿಗೆ ಬೇಸರ ಉಂಟುಮಾಡಿದೆ. ರಾಮದಾಸ್ ಅವರಿಗೆ ಸಚಿವ ಸ್ಥಾನ ಸಿಗದಿರುವುದರಿಂದ ಆಕ್ರೋಶಗೊಂಡ ಅವರ ಬೆಂಬಲಿಗರು ಪಕ್ಷಕ್ಕೆ ಮತ್ತು ಚುನಾಯಿತ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದರು. ಶಾಸಕ ರಾಮದಾಸ್ ಅವರೆ ಅವರನ್ನು ಸಮಾಧಾನಪಡಿಸಿದ್ದರು. ಇದೀಗ ದಸರಾ ಗಜಪಡೆ ಸ್ವಾಗತಕ್ಕೆ ಗೈರಾಗುವ ಮೂಲಕ ಶಾಸಕ ರಾಮದಾಸ್ ಬಂಡಾಯವೆದ್ದಂತೆ ಕಾಣುತ್ತಿದೆ.
ಇದೇ ವೇಳೆ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ವಿ.ಸೋಮಣ್ಣ, ರಾಮದಾಸ್ ಅವರೊಂದಿಗೆ ಭೇಟಿ ಮಾಡಿ ಮಾತನಾಡುತ್ತೇನೆ. ಎಲ್ಲವೂ ಸುಖಾಂತ್ಯವಾಗಲಿದೆ. ಅವರೊಂದಿಗೆ ಮಾತನಾಡಲು ನಿನ್ನೆ ಮತ್ತು ಇಂದು ಬೆಳಿಗ್ಗೆ ದೂರವಾಣಿ ಮೂಲಕ ಯತ್ನಿಸಿದೆ. ಅವರು ಕರೆ ಸ್ವೀಕರಿಸಲಿಲ್ಲ, ಆ.28 ಕ್ಕೆ ಮೈಸೂರಿಗೆ ಬರುತ್ತೇನೆ. ಆಗ ಖುದ್ದು ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಅವರಿಗೆ ಅಸಮಧಾನವಿದ್ದರೆ ಸರಿಪಡಿಸುವ ಕೆಲಸವನ್ನೂ ಮಾಡುತ್ತೇನೆ ಎಲ್ಲವೂ ಸುಖಾಂತ್ಯವಾಗಲಿದೆ ಎಂದು ಹೇಳಿದರು.