ಪ್ರಚೋದನಕಾರಿ ಹೇಳಿಕೆ ಆರೋಪ: ಸಂಸದ ನಳಿನ್ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು, ಆ.19: ಕೋಮು ಸೌಹಾರ್ದತೆಗೆ ಧಕ್ಕೆ ತರುವ ವಿಚಾರದಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.
ಈ ಕುರಿತು ಕಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲ ಎಂ.ಅರುಣ್ ಶ್ಯಾಮ್ ಅವರು, ಕಟೀಲ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರಾಜಕೀಯ ದುರುದ್ದೇಶದಿಂದ ಕೂಡಿದೆ. ನ್ಯಾಯಾಲಯದ ಅನುಮತಿ ಪಡೆಯದೇ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ, ಅವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತು. 2017ರಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ಕಾರ್ಯಕರ್ತ ಕಾರ್ತಿಕ್ ರಾಜ್‌ನನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸದಿದ್ದರೆ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಳ್ಳಾಲ ನಿವಾಸಿ ಸಂತೋಷ್ ಕುಮಾರ್ ಶೆಟ್ಟಿ ಎಂಬುವವರು ಕಟೀಲ್ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹಾಗೂ ಕೊಣಾಜೆ ಪೊಲೀಸರೂ ತಾವೆ ಖುದ್ದಾಗಿ ಪ್ರಕರಣ ದಾಖಲಿಸಿಕೊಂಡು ಮಂಗಳೂರು ಜೆಎಂಎಫ್‌ಸಿ ಕೋರ್ಟ್‌ಗೆ ತನಿಖೆ ನಡೆಸಿ ಜಾರ್ಜ್‌ಶೀಟ್ ಸಲ್ಲಿಸಿದ್ದರು. ಸದ್ಯ ಈ ದೂರಿನ ವಿಚಾರಣೆ ಬೆಂಗಳೂರಿನ ಸಿಸಿಎಚ್ ಕೋರ್ಟ್‌ನಲ್ಲಿ ನಡೆಯುತ್ತಿತ್ತು. ಇದೇ ಕೇಸ್‌ನಲ್ಲಿ ಕಟೀಲ್ ವಿರುದ್ಧ ಸಿಸಿಎಚ್ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.