ಜನಪ್ರತಿನಿಧಿಗಳ ದರ್ಪ, ಅಧಿಕಾರಿಗಳ ಅಸಹಕಾರಕ್ಕೆ ಬೇಸತ್ತ ಯುವಕನಿಂದ ದಯಾಮರಣಕ್ಕೆ ಮನವಿ

Update: 2019-08-27 16:29 GMT

ಚಾಮರಾಜನಗರ, ಆ.27: ಜನಪ್ರತಿಧಿಗಳ ದರ್ಪ ಹಾಗೂ ಸರ್ಕಾರಿ ಅಧಿಕಾರಿಗಳ ಅಸಹಕಾರದಿಂದ ಬೇಸತ್ತು ಯುವಕನೊಬ್ಬ ದಯಾಮರಣಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ.

ತಾಲೂಕಿನ ಕೆಂಪನಪುರದ ಗ್ರಾಮದ ಗಿರೀಶ್ ದಯಾಮರಣಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಯುವಕ. ಈ ನಿರ್ಧಾರಕ್ಕೆ ಕೆಂಪನಪುರ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರೇ ಕಾರಣ ಎಂದು ದಯಾಮರಣ ಮನವಿ ಪತ್ರದಲ್ಲಿ ತಿಳಿಸಿದ್ದಾನೆ.

ಗಿರೀಶ್‍ ಈ ಮೊದಲು ಕೆಂಪನಪುರ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ನಲ್ಲಿ ಗುಮಾಸ್ತನಾಗಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಸಹಕಾರ ಬ್ಯಾಂಕ್‍ನಲ್ಲಿ ಆಗುತ್ತಿರುವ ಅನ್ಯಾಯ ಅಕ್ರಮದ ಬಗ್ಗೆ ಬೇಸತ್ತು ಮಾಧ್ಯಮದವರಿಗೆ ಮಾಹಿತಿ ನೀಡಿ, ಸುದ್ದಿಗೋಷ್ಟಿ ನಡೆಸಿದ ಬಳಿಕ ಬ್ಯಾಂಕ್ ಆಡಳಿತ ಮಂಡಳಿ ಗಿರೀಶ್‍ ರನ್ನು ಕೆಲಸದಿಂದ ತೆಗೆದು ಹಾಕಿತ್ತು.

ಗಿರೀಶ್ ಮೇಲೆ ಸಾರ್ವಜನಿಕರ ವಲಯದಲ್ಲಿ ಕೆಟ್ಟ ಭಾವನೆ ಬರುವಂತೆ ಆರೋಪ ಹೊರಿಸಿದ್ದರು ಎನ್ನಲಾಗಿದ್ದು, ಇದರಿಂದ ನೊಂದ ಗಿರೀಶ್ ಕೆಂಪನಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ನಲ್ಲಿ ನಡೆದಿರುವ ಅಕ್ರಮ ಮತ್ತು ಅವ್ಯವಹಾರಗಳ ಬಗ್ಗೆ ಮಾಹಿತಿ ನೀಡುವಂತೆ ಸಹಕಾರ ಇಲಾಖೆಯ ಸಹಾಯಕ ನಿಬಂಧಕರಿಗೆ ಮಾಹಿತಿ ಹಕ್ಕಿನಡಿ ಕೇಳಿದ್ದ. ಆದರೆ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿ, ಅಕ್ರಮ ಎಸಗಿದ ಜನಪ್ರತಿನಿಧಿಗಳ ಪರವಾಗಿಯೇ ವರದಿ ನೀಡಿದ್ದನ್ನು ಮನಗಂಡು ಬೇಸತ್ತು ತನಗೆ ನ್ಯಾಯ ಸಿಗುತ್ತಿಲ್ಲ ಎಂದು ದಯಾಮರಣಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಗಿರೀಶ್‍ರವರು ಜೀವನೋಪಯಕ್ಕಾಗಿ ಗುಂಡ್ಲುಪೇಟೆಯ ಖಾಸಗಿ ರೆಸಾರ್ಟ್‍ನಲ್ಲಿ ನೌಕರಿ ಮಾಡುತ್ತಿದ್ದಾರೆ. 

ಸಹಕಾರ ಇಲಾಖೆಯ ಅಸಹಕಾರಕ್ಕೆ ಬೇಸತ್ತಿದ್ದು, ಕಂಪನಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಆಡಳಿತದ ಭ್ರಷ್ಟಚಾರ ಬಯಲಿಗೆಳೆದ ಹಿನ್ನಲೆಯಲ್ಲಿ ಕೆಂಪನಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರ ದಬ್ಬಾಳಿಕೆಯಿಂದ ನೊಂದಿದ್ದು, ಭ್ರಷ್ಟಚಾರ ಬಯಲಿಗೆ ತಂದಿದ್ದೇ ಬದುಕಿಗೆ ಕುತ್ತಾಗಿದೆ. ಪೊಲೀಸ್ ಇಲಾಖೆ ಹಾಗೂ ಸಹಕಾರ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ದಯಾಮರಣಕ್ಕೆ ನಿರ್ಧರಿಸಿದ್ದೇನೆ.

- ಗಿರೀಶ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News