ಜಾತಿವ್ಯವಸ್ಥೆ, ಅಸ್ಪೃಶ್ಯತೆ ಬಗ್ಗೆ ಚರ್ಚೆಯಾಗಬೇಕೆ ಹೊರತು ಮೀಸಲಾತಿ ಬಗ್ಗೆ ಅಲ್ಲ: ಸಂಸದ ಶ್ರೀನಿವಾಸಪ್ರಸಾದ್

Update: 2019-08-27 16:55 GMT

ಮೈಸೂರು,ಆ.27: ದೇಶದಲ್ಲಿ ಚರ್ಚೆಯಾಗಬೇಕಿರುವುದು ಜಾತಿವ್ಯವಸ್ಥೆ, ಅಸ್ಪೃಶ್ಯತೆ ಆಚರಣೆ ಬಗ್ಗೆ ಹೊರತು ಮೀಸಲಾತಿ ಬಗ್ಗೆ ಅಲ್ಲ ಎಂದು ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಹೇಳಿಕೆಗೆ ಸಂಸದ ವಿ.ಶ್ರೀನಿವಾಸಪ್ರಸಾದ್ ತಿರುಗೇಟು ನೀಡಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋಹನ್ ಭಾಗವತ್ ಮೀಸಲಾತಿ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಇದಕ್ಕೆ ನಮ್ಮ ವಿರೋಧವಿದೆ. ಇನ್ನು ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ದಲಿತ ಕಾಲೋನಿಗಳು ವಾಸ ಮಾಡುತ್ತಿವೆ. ಅವರೆಲ್ಲರನ್ನು ನಮ್ಮವರು ಎಂದು ಒಪ್ಪಿಕೊಳ್ಳಲು ಮುಂದುವರಿದ ಜನಾಂಗ ತಯಾರಿಲ್ಲ. ಹಾಗಾಗಿ ದಲಿತರು, ಶೋಷಣೆಗೊಳಗಾದವರ ನೋವು ಏನೆಂದು ಅವರಿಗೆ ಗೊತ್ತು. ಮೀಸಲಾತಿ ಜಾರಿಯಾಗಿ 70 ವರ್ಷ ಕಳೆದಿದ್ದರೂ ದೇಶದಲ್ಲಿ ಇನ್ನೂ ಜಾತೀಯತೆ, ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಇದರ ಬಗ್ಗೆ ಚರ್ಚೆಗಳಾಬೇಕು. ಅದು ಬಿಟ್ಟು ಮೀಸಲಾತಿ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳುವುದು  ಸರಿಯಲ್ಲ. ಅಂತಹ ಹೇಳಿಕೆಗಳನ್ನು ಯಾರೇ ನೀಡಿದರು ವಿರೋಧಿಸುವ ವಿವೇಚನೆ ನಮಗಿದೆ ಎಂದು ಹೇಳಿದರು.

ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೊ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎಂದು ಶ್ರೀನಿವಾಸಪ್ರಸಾದ್ ಹೇಳಿದರು. ಮೀಸಲಾತಿ ಬದಲಾವಣೆ ಹಿಂದೆ ಆರೆಸ್ಸೆಸ್ ಕೈವಾಡವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆರೆಸ್ಸೆಸ್ ಕೇಳಿಕೊಂಡು ಕೇಂದ್ರದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿಲ್ಲ. ಆರೆಸ್ಸೆಸ್ ಒಂದು ಸಂಘಟನೆ ಅಷ್ಟೆ ಅದಕ್ಕೂ ಸರಕಾರಕ್ಕೂ ಸಂಬಂಧವಿಲ್ಲ ಎಂದು  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News