×
Ad

ಇ-ಸಿಗರೇಟ್ ನಿರ್ಬಂಧ ತೆರವು ಕೋರಿ ಪಿಐಎಲ್: ಖಾಸಗಿ ಕಂಪೆನಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

Update: 2019-08-27 22:50 IST

ಬೆಂಗಳೂರು, ಆ.27: ರಾಜ್ಯದಲ್ಲಿ ಇ-ಸಿಗರೇಟ್ ನಿರ್ಬಂಧ ತೆರವು ಕೋರಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿ, ಖಾಸಗಿ ಕಂಪೆನಿಗೆ ಹೈಕೋರ್ಟ್ ಒಂದು ಲಕ್ಷ ರೂ.ದಂಡ ವಿಧಿಸಿ ಆದೇಶಿಸಿದೆ. 

ಈ ಕುರಿತು ಮುಂಬೈ ಮೂಲದ ಕೌನ್ಸಿಲ್ ಫಾರ್ ಹಾರ್ಮ್ ರೆಡ್ಯೂಸ್ ಅಲ್ಟರ್ನೆಟಿವ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ರಾಜ್ಯ ಸರಕಾರ 2016ರ ಜೂ.15ರಂದು ಇ-ಸಿಗರೇಟ್ ಅನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ, ಈ ನಿಷೇಧದಿಂದ ಇ-ಸಿಗರೇಟ್ ಉತ್ಪಾದನೆ ಮಾಡುವ ಹಲವು ಕಂಪೆನಿಗಳಿಗೆ ನಷ್ಟವುಂಟಾಗುತ್ತದೆ ಎಂದು ಪೀಠಕ್ಕೆ ತಿಳಿಸಿದರು.

ಸರಕಾರದ ಪರ ವಕೀಲ ಕಿರಣ್‌ ಕುಮಾರ್ ಅವರು ವಾದಿಸಿ, ಇ-ಸಿಗರೇಟ್‌ಗೆ ಅವಕಾಶ ನೀಡುವುದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕಾಗಿ ರಾಜ್ಯ ಸರಕಾರ 2016ರಲ್ಲಿಯೆ ಈ ಧೂಮಪಾನವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಎಫ್‌ಸಿಟಿಸಿ, ಇಎನ್‌ಡಿಎಸ್, ಯುಎಸ್‌ಎ(ಎಫ್‌ಡಿಎ) ಸಂಶೋಧಕರು ಸಂಶೋಧನೆ ನಡೆಸಿ ಇ-ಸಿಗರೇಟ್ ಬಳಕೆಯಿಂದ ಜನರ ಮೇಲೆ ಆರೋಗ್ಯದ ಸಮಸ್ಯೆ ಉದ್ಭವವಾಗುತ್ತವೆ ಎಂದು ತಿಳಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಈ ಅರ್ಜಿ ಯಾವುದೇ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿಲ್ಲ. ಈ ಅರ್ಜಿಯನ್ನು ಸ್ವಾರ್ಥಕ್ಕಾಗಿ ಹಾಕಲಾಗಿದೆ ಎಂದು ಅರ್ಜಿದಾರರ ಕಂಪೆನಿಗೆ 1 ಲಕ್ಷ ರೂ.ದಂಡ ವಿಧಿಸಿ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News