ಉತ್ತಮ ಭವಿಷ್ಯಕ್ಕಾಗಿ ಜ್ಞಾನದ ಹಸಿವು ಅಗತ್ಯ: ರಾಘವೇಂದ್ರ ಔರಾದಕರ

Update: 2019-08-28 13:32 GMT

ದಾವಣಗೆರೆ, ಆ.28: ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸ್ತಿತ್ವ ಕಂಡುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಅಗತ್ಯ ಎಂದು ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ಸಹಕಾರ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಔರಾದಕರ ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವವಿದ್ಯಾನಿಲಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜ್ಞಾನದ ಹಸಿವು, ಹೊಸತನ್ನು ಕಲಿಯುವ ಕುತೂಹಲ, ಸಾಧಿಸುವ ಛಲ, ಗುರಿಮುಟ್ಟುವ ತವಕ ಇದ್ದಾಗ ಯಶಸ್ಸು ಸುಲಭವಾಗುತ್ತದೆ. ಯಶಸ್ಸಿಗೆ ಅಡ್ಡ ದಾರಿಗಳಿಲ್ಲ. ಇದ್ದರೂ ಅವು ಶಾಶ್ವತ ಫಲ ನೀಡುವುದಿಲ್ಲ. ಹಂತ ಹಂತವಾಗಿ ಮೇಲೇರಿದಾಗ ಹೆಸರು ಅಜರಾಮರವಾಗುತ್ತದೆ ಎಂದು ನುಡಿದರು.

ಜಾಗತಿಕ ಪೈಪೋಟಿಯ ಪ್ರಸ್ತುತ ಸಂದರ್ಭದಲ್ಲಿ ಸವಾಲು ಎದುರಿಸಲು ವಿದ್ಯಾರ್ಥಿಗಳು ಸಕಲ ರೀತಿಯಲ್ಲಿ ಸನ್ನದ್ಧರಾಗಬೇಕು. ಪ್ರತಿ ವ್ಯಕ್ತಿಯ ಬೆಳವಣಿಗೆಗೆ ಶಿಕ್ಷಣವು ಅತೀ ಮುಖ್ಯ. ಅದಕ್ಕೆ ಜೀವನದಲ್ಲಿ ಶಿಸ್ತು, ಬದ್ಧತೆ, ಮಾತನಾಡುವ ಕೌಶಲ ರೂಢಿಸಿಕೊಳ್ಳಬೇಕು. ಇದು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಲಿದೆ. ನೈತಿಕತೆ, ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹಿರಿಯರು, ವಿದ್ಯೆಗೆ ಗೌರವ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಚಿಂತನೆ, ವಿಚಾರಶೀಲ ಗುಣ ಬೆಳೆಸಿಕೊಂಡು ವಿಷಯದ ಆಳಕ್ಕೆ ಇಳಿದು ವಿಶ್ಲೇಷಿಸುವ, ವಿಮರ್ಶಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಮಾತನಾಡಿ, ದಾವಣಗೆರೆ ಮತ್ತು ಕುವೆಂಪು ವಿಶ್ವವಿದ್ಯಾಲಯಗಳ ನಡುವೆ ಸಹೋದರ ಸಂಬಂಧವಿದೆ. ಎರಡೂ ವಿಶ್ವವಿದ್ಯಾಲಯಗಳ ಸಮಗ್ರ ಅಭಿವೃದ್ಧಿ, ಸಂಶೋಧನೆಗೆ ಪರಸ್ಪರ ಒಡಂಬಡಿಕೆ ಮಾಡಿಕೊಂಡು ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.

ದಿಲ್ಲಿ, ಮುಂಬೈ, ಮದ್ರಾಸ್‍ನಲ್ಲಿರುವ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ಶಿವಮೊಗ್ಗದಲ್ಲಿ ಎಕನಾಮಿಕ್ಸ್ ಸ್ಕೂಲ್ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಸ್.ವಿ. ಹಲಸೆ ಮಾತನಾಡಿ, ಉನ್ನತ ಶಿಕ್ಷಣವು ಹಿಂದುಳಿದವರು, ದಲಿತರು, ದುರ್ಬಲರ ಏಳ್ಗೆಗಾಗಿ ಆದ್ಯತೆ ನೀಡಬೇಕು. ತುಳಿತಕ್ಕೆ ಒಳಗಾದ ಜನರ ಹಿತಕ್ಕಾಗಿ, ದೇಶದ ಹಿತಕ್ಕಾಗಿ, ಏಕತೆಗಾಗಿ ಬಳಕೆಯಾದಾಗ ಶಿಕ್ಷಣದ ಸಂಕಲ್ಪ ವಿಶ್ವವಿದ್ಯಾನಿಲಯದ ಸ್ಥಾಪನೆಯ ಉದ್ದೇಶ ಸಾರ್ಥಕತೆ ಪಡೆಯುತ್ತವೆ ಎಂದು ಹೇಳಿದರು.

ಆಧುನಿಕ ಶಿಕ್ಷಣ ಪದ್ಧತಿಯು ವ್ಯಾವಹಾರಿಕ, ಆರ್ಥಿಕತೆಯನ್ನೇ ಅವಲಂಬಿಸಿದೆ. ಇದರಿಂದಾಗಿ ಸಮಾಜದಲ್ಲಿ ಭಾವನಾತ್ಮಕ ಸಂಬಂಧಗಳು ದೂರವಾಗುತ್ತಿವೆ. ಆದ್ದರಿಂದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸಾಮಾಜಿಕ ಕಳಕಳಿಯ ಮಾನವೀಯ ಮೌಲ್ಯಗಳನ್ನು ಒಳಗೊಂಡ ನೈತಿಕ ಶಿಕ್ಷಣದ ಅಗತ್ಯವಿದೆ. ಆ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳ ಶಿಕ್ಷಣಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯವು ಆದ್ಯತೆ ನೀಡಲು ಬದ್ಧವಾಗಿದೆ ಎಂದರು.

ವಿಶ್ವವಿದ್ಯಾನಿಲಯದ ಹೋರಾಟ ಸಮಿತಿಯ ಸದಸ್ಯ ಎಂ.ಎಸ್.ಕೆ.ಶಾಸ್ತ್ರಿ ಮಾತನಾಡಿ, ವಿಶ್ವವಿದ್ಯಾನಿಲಯದ ಶೈಕ್ಷಣಿಕ ಪ್ರಗತಿಯ ಅನುಕೂಲಕ್ಕಾಗಿ ನಗರದ ಯಲ್ಲಮ್ಮ ಕಾಟನ್ ಮಿಲ್ ಜಾಗವನ್ನು ವಿಶ್ವವಿದ್ಯಾನಿಲಯಕ್ಕೆ ನೀಡುವ ಕುರಿತು ಚಿಂತನೆ ನಡೆದಿದೆ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಹಣಕಾಸು ಅಧಿಕಾರಿ ಪ್ರೊ.ಬಿ.ಕೆ.ರಾಜು, ವಿವಿಧ ನಿಕಾಯಗಳ ಡೀನ್‍ಗಳಾದ ಪ್ರೊ.ಕೆ.ಬಿ.ರಂಗಪ್ಪ, ಪ್ರೊ.ಕೆ.ಲಕ್ಷ್ಮಣ್, ಪ್ರೊ. ಗಾಯತ್ರಿ ದೇವರಾಜ್, ಸಿಂಡಿಕೇಟ್ ಸದಸ್ಯರು ಭಾಗವಹಿಸಿದ್ದರು.

ಕುಲಸಚಿವ ಪ್ರೊ.ಕೆ. ಕಣ್ಣನ್ ಸ್ವಾಗತಿಸಿದರು. ಪ್ರೊ. ಶಿಶುಪಾಲ ವರದಿ ವಾಚಿಸಿದರು. ಕುಲಸಚಿವ ಪ್ರೊ. ಬಸವರಾಜ ಬಣಕಾರ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಸ್. ರಾಜಕುಮಾರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News